ಮಹಿಳಾ ಐಸಿಸ್ ತುಕಡಿಯ ನೇತೃತ್ವ ವಹಿಸಿದ್ದ ಅಮೆರಿಕದ ಮಹಿಳೆಯಿಂದ ತಪ್ಪೊಪ್ಪಿಗೆ

PHOTO: AP
ವಾಷಿಂಗ್ಟನ್, ಜೂ.8: ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕದ ಆಲಿಸನ್ ಎಲಿಝಬೆತ್ ನ್ಯಾಯಾಲಯದ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ ಎಂದು ಸಿಎನ್ಎನ್ ವರದಿ ಮಾಡಿದೆ. 2012ರಲ್ಲಿ ಸಿರಿಯಾಕ್ಕೆ ಪ್ರಯಾಣಿಸಿದ್ದ ಎಲಿಝಬೆತ್ ಅಲ್ಲಿ 100 ಮಹಿಳೆಯರು ಮತ್ತು ಮಕ್ಕಳಿದ್ದ ತುಕಡಿಗೆ ತರಬೇತಿ ನೀಡಿ ಅದರ ನೇತೃತ್ವ ವಹಿಸಿದ್ದಳು. ಮತ್ತೊಂದು ಉಗ್ರ ಸಂಘಟನೆ ಅನ್ಸಾರ್ ಅಲ್ ಶರಿಯಾದೊಂದಿಗೂ ಸಂಪರ್ಕದಲ್ಲಿದ್ದ ಎಲಿಝಬೆತ್ ಮಧ್ಯಪ್ರಾಚ್ಯದಾದ್ಯಂತ ಸಂಚರಿಸಿದ್ದಳು, ಅಲ್ಲದೆ ಲಿಬಿಯಾ, ಟರ್ಕಿ ಮತ್ತು ಈಜಿಪ್ಟ್ನಲ್ಲಿ ನೆಲೆಸಿದ್ದಳು ಎಂದು ವರದಿ ಹೇಳಿದೆ.
ತನ್ನ 2ನೇ ಪತಿಯ ಜತೆ ಐಸಿಸ್ಗೆ ಸೇರ್ಪಡೆಗೊಂಡಿದ್ದ ಎಲಿಝಬೆತ್ ಳನ್ನು ಈ ವರ್ಷದ ಜನವರಿಯಲ್ಲಿ ಸಿರಿಯಾದಲ್ಲಿ ಬಂಧಿಸಿ ಅಮೆರಿಕಕ್ಕೆ ಕರೆತರಲಾಗಿದೆ. ಐಸಿಸ್ ಗೆ ನೆರವು ನೀಡಿದ ಮತ್ತು ಆರ್ಥಿಕ ಸಂಪನ್ಮೂಲ ಒದಗಿಸಲು ಸಂಚು ಹೂಡಿದ ಆರೋಪವನ್ನು ಹೊರಿಸಿ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭ ತಪ್ಪೊಪ್ಪಿಕೊಂಡಿರುವ ಎಲಿಝಬೆತ್ಗೆ 20 ವರ್ಷದ ಜೈಲುಶಿಕ್ಷೆಯ ಸಾಧ್ಯತೆಯಿದೆ ಎಂದು ವರದಿಯಾಗಿದೆ.