ಚಿನ್ನ ಕಳ್ಳಸಾಗಣೆ ಪ್ರಕರಣ: ಸಿಎಂ ಪಿಣರಾಯಿ ವಿರುದ್ಧ ಮಾಡಿದ್ದ ಆರೋಪವನ್ನು ಸಮರ್ಥಿಸಿದ ಸ್ವಪ್ನಾ ಸುರೇಶ್

ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕುಟುಂಬದವರು ಶಾಮೀಲಾಗಿದ್ದಾರೆ ಎಂದು ಸುರೇಶ್ ಆರೋಪ ಮಾಡಿರುವುದು ಭಾರೀ ಚರ್ಚೆಗೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. 2016 ರಲ್ಲಿ ಯುಎಇಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಿಂದಿನ ದಿನ ಕರೆನ್ಸಿ ತುಂಬಿದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಎಂಬ ತಮ್ಮ ಆರೋಪದ ಹಿಂದೆ ಯಾವುದೇ “ರಾಜಕೀಯ ಅಥವಾ ವೈಯಕ್ತಿಕ ಅಜೆಂಡಾ” ಇಲ್ಲ ಎಂದು ಸ್ವಪ್ನಾ ಸುರೇಶ್ ಬುಧವಾರ ಹೇಳಿದ್ದಾರೆ.
ಸ್ವಪ್ನಾ ಸುರೇಶ್ ಬುಧವಾರ ಪಾಲಕ್ಕಾಡ್‌ನಲ್ಲಿ ಮಾಧ್ಯಮಗಳನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ, ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ವಿಎಸಿಬಿ) ತಂಡವು ಪಾಲಕ್ಕಾಡ್‌ನಲ್ಲಿರುವ ಅವರ ಫ್ಲಾಟ್‌ನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದ ಮತ್ತೊಬ್ಬ ಆರೋಪಿ ಪಿ ಎಸ್ ಸರಿತ್‌ನನ್ನು ಕಸ್ಟಡಿಗೆ ತೆಗೆದುಕೊಂಡಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ಸ್ವಪ್ನಾ ಸುರೇಶ್ ಅವರು ಈ ಆರೋಪವನ್ನು ಮಾಡಿದ್ದರು. ಇದರ ಬೆನ್ನಲ್ಲೇ, ವಿಜಯನ್ ಅವರು ತಮ್ಮ ವಿರುದ್ಧದ "ಅಜೆಂಡಾದ" ಭಾಗವಾಗಿದೆ ಎಂದು ಆರೋಪವನ್ನು ನಿರಾಕರಿಸಿದ್ದರು.
“ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರ ಹಿಂದೆ ನನಗೆ ಯಾವುದೇ ರಾಜಕೀಯ ಅಥವಾ ಯಾವುದೇ ರೀತಿಯ ವೈಯಕ್ತಿಕ ಅಜೆಂಡಾ ಇಲ್ಲ. ಸೆಕ್ಷನ್ 164 ರ ಪ್ರಕಾರ ನಾನು ಹೇಳಿಕೆಯಲ್ಲಿ ಏನು ಹೇಳಿದ್ದೇನೆ ಎಂಬುದನ್ನು ಈ ಹಿಂದೆಯೇ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ನಾನು ಬೆದರಿಕೆಯನ್ನು ಎದುರಿಸುತ್ತಿದ್ದೇನೆ ಮತ್ತು ನನ್ನ ಪ್ರಸ್ತುತ ಉದ್ಯೋಗದಾತರೂ ಇದರಿಂದ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.., ಸಾಕ್ಷ್ಯಾಧಾರವಿದೆ ಎಂಬ ಕಾರಣಕ್ಕಾಗಿ ನಾನು ಸಿಎಂ ವಿಜಯನ್ ವಿರುದ್ಧ ಹೇಳಿಕೆ ನೀಡಿದ್ದೇನೆ.” ಎಂದು ಸ್ವಪ್ನಾ ಸುರೇಶ್ ತಮ್ಮ ಆರೋಪವನ್ನು ಸಮರ್ಥಿಸಿದ್ದಾರೆ.







