ಒಂದೇ ಒಂದು ಸೀಟು ಭರ್ತಿಯಾಗದೆ ಉಳಿಯಬಾರದು: ನೀಟ್-ಪಿಜಿ ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ, ಜೂ. 8: ಒಂದೇ ಒಂದು ನೀಟ್-ಪಿಜಿ ಸೀಟು ವ್ಯರ್ಥವಾಗದಂತೆ ನೋಡಿಕೊಳ್ಳುವ ಖಾತರಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ)ಗೆ ಸೂಚಿಸಿದೆ. ನೀವು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ)ಯನ್ನು ತರಾಟೆಗೆ ತೆಗೆದುಕೊಂಡಿತು.
ಅಖಿಲ ಭಾರತ ಕೋಟಾ (ಎಐಕ್ಯು)ದಲ್ಲಿ ಖಾಲಿ ಇರುವ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಿದ ಬಳಿಕ ಲಭ್ಯವಿರುವ ಖಾಲಿ ಸೀಟುಗಳಿಗೆ ವಿಶೇಷ ಕೌನ್ಸೆಲಿಂಗ್ ಆಯೋಜಿಸುವಂತೆ ಕೋರಿ ಸಲ್ಲಿಸಿದ ಮನವಿ ಬಗ್ಗೆ ಅಫಿಡಾವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಂಸಿಸಿಗೆ ನಿರ್ದೇಶಿಸಿತು. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾಕಾಲದ ಪೀಠ, ಸೀಟುಗಳನ್ನು ಖಾಲಿ ಬಿಟ್ಟಿರುವುದು ಯಾಕೆ ಎಂಬ ಬಗ್ಗೆ ವಿವರಣೆ ನೀಡಿ ಇಂದೇ ಅಫಿಡಾವಿಟ್ ಸಲ್ಲಿಸುವಂತೆ ಸೂಚಿಸಿತು. ಅನಂತರ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ವಿಚಾರಣೆ ವೇಳೆ ನ್ಯಾಯಾಲಯ 1,456 ಸೀಟುಗಳು ಖಾಲಿ ಇವೆ ಎಂಬುದನ್ನು ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿತು. ಇದಕ್ಕೆ ಸಂಬಂಧಿಸಿ ಅಫಿಡಾವಿಟ್ ಸಲ್ಲಿಸಲು ಕಾಲಾವಕಾಶ ನೀಡುವಂತೆ ಎಂಸಿಸಿ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಮನವಿ ಮಾಡಿದರು. ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಸುವ್ಯವಸ್ಥೆ ಇಲ್ಲ ಯಾಕೆ ? ಎಂದು ನ್ಯಾಯಾಲಯ ತಿಳಿಯಲು ಬಯಸಿತು. ಅಲ್ಲದೆ, ‘‘ನಿಮಗೆ ವಿದ್ಯಾರ್ಥಿಗಳ ಒತ್ತಡದ ಮಟ್ಟದ ಬಗ್ಗೆ ತಿಳಿದಿದೆಯೇ?’’ ಎಂದು ಪ್ರಶ್ನಿಸಿತು. ಸೀಟುಗಳ ಖಾಲಿ ಇರುವುದು ಎಂಸಿಸಿಗೆ ಮೇಯಲ್ಲೇ ತಿಳಿದಿತ್ತು ಎಂಬುದು ಗಮನಕ್ಕೆ ಬಂದಾಗ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ನಮಗೆ ವೈದ್ಯರು ಹಾಗೂ ತಜ್ಞರ ಅಗತ್ಯ ಇರುವಾಗ ಸೀಟುಗಳನ್ನು ಖಾಲಿ ಇರಿಸಿ ನೀವು ಏನು ಪಡೆಯುತ್ತೀರಿ? ಎಂದು ಎಂಸಿಸಿಯನ್ನು ಪ್ರಶ್ನಿಸಿತು.







