ಇಸ್ರೇಲ್ ನ ಆಕ್ರಮಣವೇ ಹಿಂಸಾಚಾರಕ್ಕೆ ಮೂಲ ಕಾರಣ: ವಿಶ್ವಸಂಸ್ಥೆ ತನಿಖಾಧಿಕಾರಿಗಳ ತಂಡದಿಂದ ವರದಿ

PHOTO:AP
ರಮಲ್ಲಾ, ಜೂ.8: ಇಸ್ರೇಲ್ನ ಆಕ್ರಮಣ ಮತ್ತು ಪೆಲೆಸ್ತೀನೀಯರ ವಿರುದ್ಧ ತಾರತಮ್ಯವು ನಿರಂತರ ಹಿಂಸಾಚಾರಕ್ಕೆ ಮೂಲ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಇಸ್ರೇಲ್-ಪೆಲೆಸ್ತೀನ್ ಸಂಘರ್ಷದ ಮೂಲಕಾರಣವನ್ನು ಅನ್ವೇಷಿಸಲು ಕಳೆದ ವರ್ಷ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ನೇಮಿಸಿದ್ದ ತನಿಖಾಧಿಕಾರಿಗಳ ತಂಡವು ‘ಪೆಲೆಸ್ತೀನ್ ನೆಲದ ಮೇಲಿನ ತನ್ನ ಆಕ್ರಮಣವನ್ನು ಅಂತ್ಯಗೊಳಿಸಲು ಇಸ್ರೇಲ್ಗೆ ಇಚ್ಛೆಯಿಲ್ಲದಿರುವುದು ಸ್ಪಷ್ಟವಾಗಿದೆ’ಎಂದಿದೆ.
ಹಿಂದಿನ ವಿಶ್ವಸಂಸ್ಥೆ ಶಿಫಾರಸುಗಳು ಇಸ್ರೇಲ್ ಕಡೆಗೆ ಅಗಾಧವಾಗಿ ನಿರ್ದೇಶಿಸಲ್ಪಟ್ಟಿವು. ಇದು ಘರ್ಷಣೆಯ ಅಸಮ ಸ್ವರೂಪ ಮತ್ತು ಒಂದು ದೇಶ ಇನ್ನೊಂದನ್ನು ಆಕ್ರಮಿಸಿಕೊಂಡಿರುವ ಸೂಚಕವಾಗಿದೆ ಎಂದು ತನಿಖಾಧಿಕಾರಿಗಳ ತಂಡದ ನೇತೃತ್ವ ವಹಿಸಿದ್ದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಯ ದಕ್ಷಿಣ ಆಫ್ರಿಕಾ ಘಟಕದ ಮಾಜಿ ಅಧ್ಯಕ್ಷೆ ನವಿ ಪಿಳ್ಳೈ ಹೇಳಿದ್ದಾರೆ.
ಆದರೆ ಈ ಶಿಫಾರಸುಗಳನ್ನು ಜಾರಿಗೆ ತರಲಾಗಿಲ್ಲ. ಅನುಷ್ಟಾನದ ಕೊರತೆ , ಇಸ್ರೇಲ್ಗೆ ನೀಡಿರುವ ವಿನಾಯಿತಿಯಿಂದಾಗಿ ಆ ದೇಶಕ್ಕೆ ಆಕ್ರಮಣ ಅಂತ್ಯಗೊಳಿಸುವ ಇಚ್ಛೆಯಿಲ್ಲ. ಮತ್ತು ಪೂರ್ವ ಜೆರುಸಲೇಂ ಮತ್ತು ಇಸ್ರೇಲ್ನಲ್ಲಿನ ಆಕ್ರಮಿತ ಪೆಲೆಸ್ತೀನ್ ಪ್ರದೇಶದಲ್ಲಿ ನಿರಂತರ ಉಲ್ಲಂಘನೆ ಹಾಗೂ ಪೆಲೆಸ್ತೀನೀಯರ ವಿರುದ್ಧ ತಾರತಮ್ಯ ಮುಂದುವರಿಯಲು ಕಾರಣವಾಗಿದೆ ಎಂದು ನವಿ ಪಿಳ್ಳೈ ಹೇಳಿದ್ದಾರೆ. ಆದರೆ ಆಕ್ರಮಣ ಅಂತ್ಯಗೊಳಿಸುವುದು ಮಾತ್ರ ಸಾಕಾಗದು ಮತ್ತು ಮಾನವ ಹಕ್ಕುಗಳನ್ನು ಸಮಾನವಾಗಿ ಅನ್ವಯಿಸಿರುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು 18 ಪುಟಗಳ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇಸ್ರೇಲ್ ವ್ಯಕ್ತಿಗಳನ್ನು ವಿವಾಹವಾಗುವ ಪೆಲೆಸ್ತೀನೀಯರಿಗೆ ಪೌರತ್ವ ನಿರಾಕರಿಸುವ ಇಸ್ರೇಲ್ನ ಕಾನೂನು, ಅರಬ್ ಅಲ್ಪಸಂಖ್ಯಾತರಿಗೆ ಇಸ್ರೇಲ್ ವಿಭಿನ್ನ ಪೌರತ್ವ ಸ್ಥಾನಮಾನ, ಹಕ್ಕುಗಳು ಮತ್ತು ಕಾನೂನು ರಕ್ಷಣೆ ನೀಡುತ್ತಿರುವುದಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ವರದಿ ಹೇಳಿದೆ.
2021ರ ಮೇ ತಿಂಗಳಿನಲ್ಲಿ ಗಾಝಾದಲ್ಲಿ ಇಸ್ರೇಲ್ ನಡೆಸಿದ ಯುದ್ಧದಲ್ಲಿ ಸುಮಾರು 260 ಪೆಲೆಸ್ತೀನಿಯರು ಮೃತಪಟ್ಟ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ತನಿಖಾ ಸಮಿತಿಯನ್ನು ರಚಿಸಿದೆ. ಆದರೆ ಸಮಿತಿಯ ಜತೆ ಸಹಕರಿಸಲು ನಿರಾಕರಿಸಿದ್ದ ಇಸ್ರೇಲ್, ಈಗ ಸಮಿತಿಯ ವರದಿ ‘ವಾಮಾಚಾರವಾಗಿದೆ ಮತ್ತು ಏಕಪಕ್ಷೀಯ ವರದಿ’ಎಂದು ಪ್ರತಿಕ್ರಿಯಿಸಿದೆ.
ವಿಶ್ವಸಂಸ್ಥೆಯ ತನಿಖಾ ಸಮಿತಿ ಕೆಲವು ಮಾಹಿತಿಗಳನ್ನು ಪೆಲೆಸ್ತೀನಿಯನ್ ಮಾನವ ಹಕ್ಕು ತಂಡ ಅಲ್ಹಕ್ನಿಂದ ಪಡೆದಿದೆ. ಇದೇ ಪ್ರಥಮ ಬಾರಿಗೆ ಇಸ್ರೇಲ್ನಲ್ಲಿನ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದ ತನಿಖೆ ನಡೆಸಲು ವಿಶ್ವಸಂಸ್ಥೆ ನೇತೃತ್ವದ ಸಮಿತಿ ರಚನೆಯಾಗಿದೆ. ಸಮಿತಿ ಅತ್ಯಂತ ಮಹತ್ವದ ಅಂತರಾಷ್ಟ್ರೀಯ ವರದಿಯನ್ನು ನೀಡಿದೆ.
ಇದೇ ಪ್ರಥಮ ಬಾರಿಗೆ ಇಸ್ರೇಲ್ನಲ್ಲಿನ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ತನಿಖೆಗೆ ಸಮಿತಿಯೊಂದನ್ನು ವಿಶ್ವಸಂಸ್ಥೆ ರಚಿಸಿದೆ ಮತ್ತು ಸಮಿತಿ ಮಹತ್ವದ ಅಂತರಾಷ್ಟ್ರೀಯ ವರದಿ ನೀಡಿದೆ. ಇದು ಪೆಲೆಸ್ತೀನೀಯರಿಗೆ ದೊರಕಿರುವ ನೈತಿಕ ಗೆಲುವಾಗಿದೆ. ಪೆಲೆಸ್ತೀನೀಯರ ವಿರುದ್ಧ ನಡೆಸುತ್ತಿರುವ ಅಪರಾಧಗಳ ಹೊಣೆಗಾರಿಕೆಯಿಂದ ಇಸ್ರೇಲ್ ನುಣುಚಿಕೊಳ್ಳುತ್ತಿರುವ ಬಗ್ಗೆ ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಈ ವರದಿ ರಸ್ತೆಯ ಮುಕ್ತಾಯವಲ್ಲ, ಈ ವರದಿಯನ್ನು ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಹಸ್ತಾಂತರಿಸುವ ಪ್ರಮುಖ ಹೊಣೆ ಸಮಿತಿಯ ಮೇಲಿದೆ ಎಂದು ಅಲ್ಹಕ್ನ ನಿರ್ದೇಶಕ ಶವಾನ್ ಜಬರಿನ್ರನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಇಸ್ರೇಲ್ ಅನ್ನು ಖಂಡಿಸುವ ಮತ್ತು ಆ ದೇಶಕ್ಕೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸುವ ಯಾವುದೇ ಅಂತರಾಷ್ಟ್ರೀಯ ತನಿಖೆ ಮತ್ತದರ ವರದಿ ಸ್ವಾಗತಾರ್ಹ ಎಂದು ಪೆಲೆಸ್ತೀನ್ ಅಥಾರಿಟಿ(ಪಿಎ) ವಕ್ತಾರ ಇಬ್ರಾಹಿಂ ಮೆಲ್ಹಮ್ ಹೇಳಿದ್ದಾರೆ. ದೂಷಣೆಯಿಂದ ಮುಂದೆ ಸಾಗಿ ಇಸ್ರೇಲ್ ಅನ್ನು ಹೊಣೆಗಾರರನ್ನಾಗಿಸಬೇಕು ಮತ್ತು ಆ ದೇಶದ ವಿರುದ್ಧ ನಿರ್ಬಂಧ ಜಾರಿಗೊಳಿಸುವಂತೆ ವಿಶ್ವಸಂಸ್ಥೆಯನ್ನು ಆಗ್ರಹಿಸುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.