ಎರಡು ಬಾರಿ ಸತತ 3 ಶತಕ: ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಬಾಬರ್ ಆಝಮ್
ವಿರಾಟ್ ಕೊಹ್ಲಿ ವಿಶ್ವ ದಾಖಲೆಯನ್ನೂ ಮುರಿದ ಪಾಕ್ ಕ್ರಿಕೆಟಿಗ

Photo: PTI
ಮುಲ್ತಾನ್, ಜೂ.9: ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.
ಏಕದಿನ ಕ್ರಿಕೆಟ್ ನಲ್ಲಿ ತಾನಾಡಿದ 87ನೇ ಪಂದ್ಯದಲ್ಲಿ 17 ನೇ ಶತಕ(103 ರನ್, 107 ಎಸೆತ) ಸಿಡಿಸಿದ ಆಝಮ್ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದರು. ಈ ವರ್ಷದ ಆರಂಭದಲ್ಲಿ ಲಾಹೋರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 114 ಹಾಗೂ ಔಟಾಗದೆ 105 ರನ್ ಗಳಿಸಿದ ಬಾಬರ್ ಇದೀಗ ಸತತ ಮೂರನೇ ಶತಕ ಸಿಡಿಸಿದರು. ಇದರೊಂದಿಗೆ ಬಾಬರ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡು ಬಾರಿ ಸತತ ಮೂರು ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಬಾಬರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ 2016 ರಲ್ಲಿ ಯುಎಇಯಲ್ಲಿ ನಡೆದ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ಸತತ ಮೂರು ಶತಕಗಳನ್ನು(120, 123 ಹಾಗೂ 117 ರನ್) ಸಿಡಿಸಿದ ಸಾಧನೆಯನ್ನು ಮಾಡಿದ್ದರು.
ಪಾಕಿಸ್ತಾನದ ನಾಯಕ ಪ್ರಸ್ತುತ ಭರ್ಜರಿ ಫಾರ್ಮ್ ನಲ್ಲಿದ್ದಾರೆ, ಕಳೆದ 5 ಇನ್ನಿಂಗ್ಸ್ಗಳಲ್ಲಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅದರಲ್ಲಿ ನಾಲ್ಕು ಶತಕಗಳಿವೆ.
ಬಾಬರ್ ಅವರ ಶತಕದ ಸಹಾಯದಿಂದ ಪಾಕ್ ತಂಡವು ಸರಣಿಯ ಮೊದಲ ಪಂದ್ಯವನ್ನು 5 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು.
ಬಾಬರ್ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟಿನ ಐಸಿಸಿ ರ್ಯಾಂಕಿಂಗ್ ನಲ್ಲಿ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿದ್ದು, ಟೆಸ್ಟ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಅವರ ವಿಶ್ವದಾಖಲೆ ಮುರಿದ ಬಾಬರ್ ಆಝಮ್
ಮುಲ್ತಾನ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಸಂದರ್ಭದಲ್ಲಿ ಬಾಬರ್ ಆಝಮ್ ನಾಯಕನಾಗಿ ವೇಗವಾಗಿ 1,000 ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದರು. ಅವರು ಪಾಕಿಸ್ತಾನದ ನಾಯಕರಾಗಿ ತಮ್ಮ 13 ನೇ ಇನಿಂಗ್ಸ್ ನಲ್ಲಿ 1,000 ಗಡಿಯನ್ನು ತಲುಪಿದರು. 17 ನೇ ಇನಿಂಗ್ಸ್ನಲ್ಲಿ 1,000 ರನ್ ತಲುಪಿದ್ದ ಭಾರತದ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿಸಿದರು.
ಬಾಬರ್ ಈ ಸಾಧನೆಯೊಂದಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (20 ಇನಿಂಗ್ಸ್) ಹಾಗೂ ನ್ಯೂಝಿಲ್ಯಾಂಡ್ನ ಕೇನ್ ವಿಲಿಯಮ್ಸನ್ (23 ಇನಿಂಗ್ಸ್) ರನ್ನು ಹಿಂದಿಕ್ಕಿದರು.
2017 ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ದ್ವಿಪಕ್ಷೀಯ ಏಕದಿನ ಸರಣಿಯ ಸಂದರ್ಭದಲ್ಲಿ ಕೊಹ್ಲಿ ತಮ್ಮ 17 ನೇ ಇನಿಂಗ್ಸ್ನಲ್ಲಿ 1,000 ರನ್ ತಲುಪಿದ್ದರು.
ಬುಧವಾರದ ಪಂದ್ಯಕ್ಕೆ ಮೊದಲು ಕೊಹ್ಲಿ ದಾಖಲೆಯನ್ನು ಮುರಿಯಲು ಬಾಬರ್ಗೆ 98 ರನ್ಗಳ ಅಗತ್ಯವಿತ್ತು.
27 ರ ಹರೆಯದ ಬಾಬರ್ ಪಾಕಿಸ್ತಾನದ ಏಕದಿನ ನಾಯಕನಾಗಿ 13 ಇನಿಂಗ್ಸ್ಗಳಲ್ಲಿ 91.36 ರ ಸರಾಸರಿಯಲ್ಲಿ 1,005 ರನ್ಗಳನ್ನು ಗಳಿಸಿದ್ದಾರೆ. 103.71 ರ ಸ್ಟ್ರೈಕ್ ರೇಟ್ನೊಂದಿಗೆ ಆರು ಶತಕಗಳು ಹಾಗೂ ಮೂರು ಅರ್ಧ ಶತಕಗಳನ್ನು ಸಿಡಿಸಿದ್ದಾರೆ.