ಕಾಲ್ನಡಿಯಲ್ಲಿ ಹಜ್ ಯಾತ್ರೆ ಹೊರಟ ಸಿಯಾಬ್ ಚೊಟ್ಟೂರು; ಮುಲ್ಕಿ ಕೇಂದ್ರ ಶಾಫಿ ಮಸೀದಿಯಲ್ಲಿ ಜುಮಾ ನಮಾಝ್: ಇನಾಯತ್ ಆಲಿ

ಸಿಯಾಬ್ ಚೊಟ್ಟೂರು
ಮಂಗಳೂರು: ಕೇರಳದ ಮಲಪ್ಪುರಂ ಜಿಲ್ಲೆಯ ಸಿಯಾಬ್ ಚೊಟ್ಟುರು ಅವರು ಕಾಲ್ನಡಿಗೆಯ ಮೂಲಕ ಹಜ್ ಯಾತ್ರೆಗೆ ಹೊರಟಿದ್ದು, ಶುಕ್ರವಾರ ಜುಮಾ ನಮಾಝ್ ಗೆ ಮುಲ್ಕಿ ಕೇಂದ್ರ ಜುಮಾ ಮಸೀದಿಗೆ ತಲುಪಲಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮುಲ್ಕಿ ಕೇಂದ್ರ ಜುಮಾ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಆಲಿ ಅವರು, ಕಾಲ್ನಡಿಗೆ ಮೂಲಕ ಪವಿತ್ರ ಹಜ್ಗೆ ಹೊರಟಿರುವ ಕೇರಳದ ಮಲಪ್ಪುರಮ್ ನಿವಾಸಿ ಸಿಯಾಬ್ ಚೊಟ್ಟುರು ಅವರನ್ನು ಮಧ್ಯಾಹ್ನ 11 ಗಂಟೆಗೆ ಹಳೆಯಂಗಡಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಶುಕ್ರವಾರದ ಜುಮಾ ನಮಾಝ್ ಗೆ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಗೆ ಅವರು ತಲುಪಲಿದ್ದಾರೆ. ಬಳಿಕ ಮಧ್ಯಾಹ್ನದ ಬೋಜನ ಮಾಡಿ ಅಲ್ಪ ವಿಶ್ರಾಂತಿ ಪಡೆದು ಉಡುಪಿಯ ಭಾಗಕ್ಕೆ ತಮ್ಮ ಯಾತ್ರೆಯನ್ನು ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಮೇಯರ್ ಅಶ್ರಫ್ ಅವರ ಮನವಿಯ ಮೇರೆಗೆ ಸಿಯಾಬ್ ಚೊಟ್ಟುರು ಅವರು ಜುಮಾ ನಮಾಝ್ ಗೆ ಮುಲ್ಕಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು, ಮುಲ್ಕಿ ವಲಯ, ಹಳೆಯಂಗಡಿ ವಲಯ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಜಮಾಅತ್ ಸಮಿತಿಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಸಿಯಾಬ್ ಚೊಟ್ಟೂರು ಅವರನ್ನು ಉತ್ತಮ ರೀತಿಯಲ್ಲಿ ಸತ್ಕರಿಸಿ ಹಜ್ ಯಾತ್ರೆಗೆ ಅನುವು ಮಾಡಿಕೊಡಬೇಕಿದೆ ಎಂದು ಇನಾಯತ್ ಆಲಿ ಮನವಿ ಮಾಡಿದ್ದಾರೆ.
ನಾನು ಕಾರ್ಯನಿಮಿತ್ತ ದಿಲ್ಲಿಯಲ್ಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಗರಿಷ್ಠ ಪ್ರಯತ್ನ ಮಾಡುತ್ತೇನೆ. ಸಿಯಾಬ್ ಚೊಟ್ಟೂರು ಅವರು 2023ರ ಹಜ್ ನಲ್ಲಿ ಭಾಗವಹಿಸಲು ತೆರಳುತ್ತಿದ್ದು, 9 ತಿಂಗಳ ಸುದೀರ್ಘ ಕಾಲ್ನಡಿಗೆಯ ಹಜ್ ಯಾತ್ರೆಗೆ ಉತ್ತಮ ಆರೋಗ್ಯ ಕರುಣಿಸಲೆಂದು ಬೇಡುತ್ತೇನೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಅಧ್ಯಕ್ಷರಾದ ಬಿ.ಎಂ. ಲಿಯಾಕತ್ ಅಲಿ, ಬಿ.ಎಂ.ಆಸೀಫ್ ಕೊಲ್ನಾಡು ಅವರನ್ನು ಸಂಪರ್ಕಿಸಬಹುದು ಎಂದು ಇನಾಯತ್ ಆಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







