ರಾಜ್ಯಸಭಾ ಚುನಾವಣೆಯಲ್ಲಿ ನವಾಬ್ ಮಲಿಕ್, ಅನಿಲ್ ದೇಶ್ ಮುಖ್ ಮತ ಚಲಾಯಿಸುವಂತಿಲ್ಲ: ಮುಂಬೈ ಕೋರ್ಟ್

ನವಾಬ್ ಮಲಿಕ್, Photo:PTI
ಮುಂಬೈ: ಪ್ರತಿ ಮತವೂ ಅತ್ಯಂತ ಮುಖ್ಯವಾಗಿರುವ ರಾಜ್ಯಸಭಾ ಚುನಾವಣೆಗೆ ಮೊದಲು ಮಹಾರಾಷ್ಟ್ರದ ಆಡಳಿತ ಪಕ್ಷದ ಇಬ್ಬರು ನಾಯಕರಾದ ನವಾಬ್ ಮಲಿಕ್ ಹಾಗೂ ಅನಿಲ್ ದೇಶ್ ಮುಖ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯವು ಗುರುವಾರ ತಿರಸ್ಕರಿಸಿದ್ದು, ಬಂಧಿತ ಇಬ್ಬರೂ ನಾಯಕರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ತೀರ್ಪು ನೀಡಿದೆ.
ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಫೆಬ್ರವರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾರೆ. ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕೂಡ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಇಬ್ಬರೂ ಒಂದು ದಿನದ ಜಾಮೀನಿಗಾಗಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ಏಳು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಆಡಳಿತಾರೂಢ ಶಿವಸೇನೆ ಇಬ್ಬರು ಅಭ್ಯರ್ಥಿಗಳಾದ ಸಂಜಯ್ ರಾವತ್ ಹಾಗೂ ಸಂಜಯ್ ಪವಾರ್ ಅವರನ್ನು ಕಣಕ್ಕಿಳಿಸಿದೆ. ಪ್ರತಿಪಕ್ಷ ಬಿಜೆಪಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಅನಿಲ್ ಬೋಂಡೆ ಹಾಗೂ ಧನಂಜಯ್ ಮಹಾದಿಕ್ ಅವರನ್ನು ತನ್ನ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದೆ.
ಆಡಳಿತಾರೂಢ ಮಿತ್ರಪಕ್ಷಗಳಾದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಹಾಗೂ ಕಾಂಗ್ರೆಸ್ ತಲಾ ಒಬ್ಬ ಅಭ್ಯರ್ಥಿಗಳಾದ ಪ್ರಫುಲ್ ಪಟೇಲ್ ಮತ್ತು ಇಮ್ರಾನ್ ಪ್ರತಾಪ್ಗರ್ಹಿ ಅವರನ್ನು ನಾಮನಿರ್ದೇಶನ ಮಾಡಿವೆ.
ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಯಾವುದೇ ಅಭ್ಯರ್ಥಿಗೆ 42 ಮತಗಳ ಅಗತ್ಯವಿದೆ.







