ಅವೈಜ್ಞಾನಿಕ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ವಿರೋಧ; ತಾತ್ಕಾಲಿಕ ಕಲ್ಲುಗಳ ತೆರವಿಗೆ ಡಿವೈಎಫ್‌ಐ ಒತ್ತಾಯ

ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅವೈಜ್ಞಾನಿಕ ಟ್ರಾಫಿಕ್ ಐಲ್ಯಾಂಡ್‌ಗಳ ನಿರ್ಮಾಣ ಕ್ಕಾಗಿ ತಾತ್ಕಾಲಿಕ ಕಲ್ಲುಗಳನ್ನು ಹಾಕಲಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗು ತ್ತಿದ್ದು, ವಾರದೊಳಗೆ ಆ ಕಲ್ಲುಗಳನ್ನು ತೆರವುಗೊಳಿಸದಿದ್ದರೆ ಸಾರ್ವಜನಿಕರೊಂದಿಗೆ ಸಂಘಟನೆಯ ಕಾರ್ಯ ಕರ್ತರೇ ಆ ಕಾರ್ಯವನ್ನು ಮಾಡಲಿದ್ದಾರೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದ್ದಾರೆ.
ನಗರದ ಹ್ಯಾಮಿಲ್ಟನ್ ಸರ್ಕಲ್‌ನಲ್ಲಿ ಡಿವೈಎಫ್‌ಐ ನೇತೃತ್ವದಲಿ ನಗರದ ವಿವಿಧ ಕಡೆ ಟ್ರಾಫಿಕ್ ಐಲ್ಯಾಂಡ್ ರಚನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಟ್ರಾಫಿಕ್ ಐಲ್ಯಾಂಡ್ ನಿರ್ಮಾಣದ ಹಿನ್ನೆಲೆಯಲ್ಲಿ ಒಂದು ವಾರದ ಪ್ರಾಯೋಗಿಕ ನೆಲೆಯಲ್ಲಿ ನಗರದ ಹ್ಯಾಮಿಲ್ಟನ್, ಕ್ಲಾಕ್‌ಟವರ್ ಬಳಿ ಕಲ್ಲುಗಳನ್ನು ಹಾಕಿ ವಿನ್ಯಾಸ ಮಾಡಲಾಗಿದೆ. ಆದರೆ ಇದರಿಂದ ಈಗಾಗಲೇ ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಲೇಡಿಗೋಶನ್‌ನ ರಕ್ತನಿಧಿಯಿಂದ ನಗರದ ಬೇರೆ ಆಸ್ಪತ್ರೆಗಳಿಗೆ ರಕ್ತ ವರ್ಗಾವಣೆಗೆ ಗಂಟೆಗಟ್ಟಲೆ ಸಂಚಾರ ಮಾಡಬೇಕಾಗಿದೆ. ಬೀದಿ ಬದಿ ವ್ಯಾಪಾರಿಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎನ್ನುವವರಿಗೆ ಇಂತಹ ಅವೈಜ್ಞಾನಿಕ ರಸ್ತೆ ಕಾಮಗಾರಿಗಳ ಬಗ್ಗೆ ಅರಿವು ಯಾಕೆ ಆಗುತ್ತಿಲ್ಲ ಎಂದವರು ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಅಭಿವೃದ್ಧಿ ವೇಗ ಪಡೆಯಲಿದೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ ಯೋಜನೆ ವಿಫಲವಾಗಿದೆ. ನಗರದ ಎಂಟು ವಾರ್ಡ್‌ಗಳನ್ನು ಒಳಗೊಂಡು ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಹೆಸರಿನಲ್ಲಿ ಕೇವಲ ರಸ್ತೆಗಳಿಗೆ ಸಿಮೆಂಟ್ ಹಾಕುವ ಕಾರ್ಯ ಮಾತ್ರ ನಡೆಯುತ್ತಿದ್ದ. ಈಗಾಗಲೇ ಇದ್ದ ಡಿವೈಡರ್‌ಗಳನ್ನು ಒಡೆದು ಸಾರ್ವಜನಿಕರ ಹಣ ಪೋಲು ಮಾಡಲಾಗಿದೆ. ವೃತ್ತಗಳನ್ನು ತೆಗೆದು ಟ್ರಾಫಿಕ್ ಐಲ್ಯಾಂಡ್ ರಚನೆಯ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ನಗರದಲ್ಲಿ ಇಂತಹ ಅವೈಜ್ಞಾನಿಕ ಕ್ರಮಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಇದ್ದ ಕಾಂಕ್ರೀಟ್ ರಸ್ತೆ, ವ್ಯವಸ್ಥೆಗಳನ್ನು ತೆರವುಗೊಳಿಸಿ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಲಾಗು ತ್ತಿದೆ. ಇದು ಪರ್ಸೆಂಟ್ ಕಮಿಷನ್ ರಾಜಕೀಯದ ಭಾಗ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ದಯಾನಂದ ಶೆಟ್ಟಿ, ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಮಾಧುರಿ ಬೋಳಾರ, ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ, ದಿನಕರ ಬಂಗೇರ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಾಮಾಜಿಕ ಕಾರ್ಯ ಕರ್ತ ಜೆರಾರ್ಡ್ ಟವರ್ಸ್, ಹಮಾಲಿ ಸಂಘದ ಮುಖಂಡರಾದ ವಿಲ್ಲಿ ವಿಲ್ಸನ್, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಮುಕಂಡರಾದ ಪ್ರಥಮ್ ಬಜಾಲ್, ರೇವಂತ್ ಮೊದಲಾದವರು ಭಾಗವಹಿಸಿದ್ದರು.







