ಜೂ.11ರಂದು ಯೆನೆಪೊಯ ಆಸ್ಪತ್ರೆಯಲ್ಲಿ ನೂತನ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಉದ್ಘಾಟನೆ

ಮಂಗಳೂರು: ನಗರದ ದೇರಳಕಟ್ಟೆ ಯೆನೆಪೊಯ ಕ್ಯಾಂಪಸ್ ನಲ್ಲಿ ಜೂ.11ರಂದು ಟಾಟಾ ಟ್ರಸ್ಟ್ ಸಹಕಾರ ದೊಂದಿಗೆ ಝುಲೈಕಾ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆಂಕಾಲಜಿ ಕೇಂದ್ರ ನೂತನ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಯೆನೆಪೊಯ ವಿ.ವಿ.ಯ ಉಪಕುಲಪತಿ ಡಾ.ಎಂ. ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಮಾರಂಭದಲ್ಲಿ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೂತನ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ.
ಮುಂಬೈನ ಟಾಟಾ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಎನ್.ಶ್ರೀ ನಾಥ್ ಪಾಲ್ಗೋಳ್ಳಲಿದ್ದಾರೆ. ಜೂ.11ರಂದು ಸಂಜೆ 3 ಗಂಟೆಗೆ ಉದ್ಘಾಟನೆ ನಡೆಯಲಿದೆ. ಗ್ರಾಮೀಣ ಭಾಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ನೀಡುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಡಾ. ವಿಜಯ ಕುಮಾರ್ ತಿಳಿಸಿದ್ದಾರೆ.
ಈ ನೂತನ ಕೇಂದ್ರವೂ ಸುಮಾರು 36,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಯೆನೆಪೋಯ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗಿದ್ದು, ಆರು ಬಹುಮಹಡಿಯನ್ನು ಹೊಂದಿದೆ, ಎರಡು ರೇಡಿಯೋ ಥೆರಪಿ ಬಂಕರ್‌ಗಳು, ಒಂದು ಬ್ರಾಕಿಥೆರಪಿ ಬಂಕರ್ ಹೊಂದಿದೆ. ಟ್ರೂಭೀಮ್ ರೇಡಿಯೋ ಥೆರಪಿ ಯಂತ್ರವನ್ನು ಕಾನ್ಸರ್‌ಗೆ ಬಳಸಲಾಗುತ್ತಿದೆ ವಿಕಿರಣ ಚಿಕಿತ್ಸೆಗಳಿಗೆ ಸೌಲಭ್ಯ ಗಳು,ಪ್ರತ್ಯೇಕ ನೂಕ್ಲಿಯರ್ ಮೆಡಿಸಿನ್ ಸೌಲಭ್ಯವನ್ನು ಹೊಂದಿದೆ. ಇದರ ಜೊತೆಗೆ ಕಿಮೋಥೆರಪಿಯನ್ನು ನಿರ್ವಹಿಸಲು 10 ಹಾಸಿಗೆಗಳ ಡೇ ಕೇರ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಇಡೀ ಯೋಜನೆಯನ್ನು ಅಲಮೇಲು ಚಾರಿಟೇಬಲ್ ಫೌಂಡೇಶನ್ ಮೂಲಕ ಟಾಟಾ ಟ್ರಸ್ಟ್‌ಗಳು ಅಳವಡಿಸಲು ನೆರವು ನೀಡಿದೆ. ಈ ಕೇಂದ್ರ ಅಂತರಾಷ್ಟ್ರೀಯ ಮಟ್ಟದಲ್ಲಿ, ತರಬೇತಿ ಪಡೆದ ಕ್ಯಾನ್ಸರ್ ತಜ್ಞರ ತಂಡದಿಂದ ಕೈಗೆಟುಕುವ ವೆಚ್ಚದಲ್ಲಿ, ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಯೆನೆಪೊಯ ಆಸ್ಪತ್ರೆ 1100 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಕ್ಯಾನ್ಸರ್ ಚಿಕಿತ್ಸೆ ನಡೆಸುತ್ತಾ ಬಂದಿದೆ. ನೂತನ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ 120 ಹಾಸಿಗೆಗಳ ಪ್ರತ್ಯೇಕ ಕೇಂದ್ರವನ್ನು ಹೊಂದಿದೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ. ಜಲಾಲುದ್ದೀನ್ ಅಕ್ಬರ್, ಡಾ.ರಾಜೇಶ್ ಕೃಷ್ಣ, ಡಾ.ರೋಹನ್ ಶೆಟ್ಟಿ, ಅರುಣ್ ಎಸ್ ನಾಥ್, ಅಚ್ಚುತ ನಾಯಕ್ ಉಪಸ್ಥಿತರಿದ್ದರು.