‘ಪುರೋಹಿತ’ ಚಕ್ರತೀರ್ಥನಿಂದ ಪಠ್ಯಪುಸ್ತಕ ಅಧ್ವಾನ: ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಜೂ.9: ರೋಹಿತ್ ಚಕ್ರತೀರ್ಥನನ್ನು ಪುರೋಹಿತ ಎನ್ನುವುದು ಸರಿಯಿದ್ದು, ಈತನಿಂದ ಪಠ್ಯ ಪುಸ್ತಕವೇ ಅಧ್ವಾನವಾಗಿದೆ ಎಂದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಟೀಕಿಸಿದರು.
ಗುರುವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಭೀಮವಾದ ಪ್ರಕಾಶನ ಹಾಗೂ ಕಲಾ ಕುಸುಮ ಕ್ರಿಯೇಷನ್, ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪ ಅವರ 84ನೆ ಜಯಂತಿ ಹಾಗೂ ಡಾ.ಸಿ.ಚಂದ್ರಪ್ಪ ಅವರ ‘ವೈಚಾರಿಕ ತಂದೆ ಪೆರಿಯಾರ್’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಚಿಕ್ಕಮಕ್ಕಳು ತಾವು ಗೋಡೆ ಮೇಲೆ ಚಿತ್ರ ಬಿಡಿಸುತ್ತೇವೆ ಎಂದು ಬೇಡಿಕೆ ಇಡುವ ಮಾದರಿಯಲ್ಲಿಯೇ ರಾಜ್ಯ ಸರಕಾರ ಈ ಪುರೋಹಿತ ಚಕ್ರತೀರ್ಥನ ಕೈಯಲ್ಲಿ ಪಠ್ಯ ಪರಿಷ್ಕರಣೆ ನೀಡಿದೆ. ಈತನಿಂದ ಪರಿಷ್ಕರಣೆಯೇ ಅಧ್ವಾನ ಆಗಿದ್ದು, ನೈಜತೆಯನ್ನೆ ಮರೆಮಾಚಲಾಗಿದೆ ಎಂದು ಅವರು ಹೇಳಿದರು.
ಪಠ್ಯ ಪುಸ್ತಕಗಳ ಮೂಲಕ ಪುಟ್ಟ ಮಕ್ಕಳಿಗೆ ವಾಸ್ತವಿಕತೆ, ಅರಿವು ಮೂಡಿಸಲು ಮುಂದಾಗಬೇಕಿದ್ದ ಸರಕಾರ, ಕೋಮುವಾದ, ಬ್ರಾಹ್ಮಣ್ಯೀಕರಣ ತುಂಬಿದೆ. ಅಷ್ಟೇ ಅಲ್ಲದೆ, ಸನಾತನವಾದವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿರುವುದು ಆತಂಕ ತಂದಿದೆ ಎಂದರು.
ಎಡಪಂಥೀಯರು ಯಾವುದೇ ವಿಚಾರಗಳನ್ನು ಉದ್ದೇಶಪೂರ್ವಕವಾಗಿ ತುಂಬಿಲ್ಲ. ಸಂವಿಧಾನ ಆಶಯಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಪಠ್ಯದಲ್ಲಿ ಸೇರಿಸಿದ್ದಾರೆ. ಆದರೆ, ಈ ಬಗ್ಗೆ ಕೆಲವರು ಅಪಪ್ರಚಾರ ಮಾಡುವುದು ಸೂಕ್ತವಲ್ಲ ಎಂದ ಅವರು, ಕೇಸರೀಕರಣ ಸಿದ್ದಾಂತದ ವಿರುದ್ಧ ನಾವು ಜನಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ನುಡಿದರು.







