ರಣಜಿ : ನೂತನ ವಿಶ್ವ ದಾಖಲೆ ನಿರ್ಮಿಸಿದ ಮುಂಬೈ
ಉತ್ತರಾಖಂಡ ವಿರುದ್ಧ 725 ರನ್ಗಳ ಅಂತರದ ಜಯ

Photo: twitter
ಬೆಂಗಳೂರು, ಜೂ.9: ದೇಶೀಯ ಕ್ರಿಕೆಟ್ನ ಯಶಸ್ವಿ ತಂಡ ಮುಂಬೈ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಉತ್ತರಾಖಂಡ ವಿರುದ್ಧ 725 ರನ್ಗಳ ಭಾರೀ ಅಂತರದಿಂದ ಜಯ ಸಾಧಿಸುವುದರೊಂದಿಗೆ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿತು. ಮುಂಬೈಯ ಅಮೋಘ ಸಾಧನೆಯೊಂದಿಗೆ 92 ವರ್ಷಗಳ ಹಳೆಯ ವಿಶ್ವ ದಾಖಲೆಯೊಂದು ಪತನವಾಯಿತು.
ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದ ನಾಲ್ಕನೇ ದಿನವಾದ ಗುರುವಾರ ಮುಂಬೈ ಈ ಸಾಧನೆ ಮಾಡಿದ್ದು, ಈ ಮೂಲಕ ಸೆಮಿ ಫೈನಲ್ ತಲುಪಿದೆ. ಮುಂದಿನ ಸುತ್ತಿನಲ್ಲಿ ಉತ್ತರಪ್ರದೇಶವನ್ನು ಎದುರಿಸಲಿದೆ.
ಮುಂಬೈ ತಂಡ ಭರ್ಜರಿ ಗೆಲುವಿನೊಂದಿಗೆ ನ್ಯೂ ಸೌತ್ ವೇಲ್ಸ್ 1929-30ರಲ್ಲಿ ಶೀಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನಿರ್ಮಿಸಿರುವ ದಾಖಲೆಯನ್ನು ಮುರಿಯಿತು. ಆಗ ಸೌತ್ ವೇಲ್ಸ್ ತಂಡ ಕ್ವೀನ್ಸ್ಲ್ಯಾಂಡ್ ವಿರುದ್ಧ 685 ರನ್ ಅಂತರದಿಂದ ಜಯ ಸಾಧಿಸಿತ್ತು.
ರಣಜಿ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ಅಂತರದ ಗೆಲುವಿನ ದಾಖಲೆ ಬಂಗಾಳ ತಂಡದ ಹೆಸರಲ್ಲಿದೆ. 1953-54ರಲ್ಲಿ ಬಂಗಾಳವು ಒಡಿಶಾ ತಂಡವನ್ನು 540 ರನ್ ಅಂತರದಿಂದ ಸೋಲಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನದಿಂದಲೇ ಪ್ರಾಬಲ್ಯ ಸಾಧಿಸುತ್ತಾ ಬಂದಿರುವ 41 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತನ್ನ 2ನೇ ಇನಿಂಗ್ಸ್ನ್ನು 3 ವಿಕೆಟ್ ನಷ್ಟಕ್ಕೆ 261 ರನ್ಗೆ ಡಿಕ್ಲೇರ್ ಮಾಡಿತು. ಉತ್ತರಾಖಂಡ ಗೆಲುವಿಗೆ 794 ರನ್ ಕಠಿಣ ಗುರಿ ನೀಡಿತು.
ಮೊದಲ ಇನಿಂಗ್ಸ್ನಲ್ಲಿ ಕೇವಲ 114 ರನ್ಗೆ ಆಲೌಟಾಗಿದ್ದ ಉತ್ತರಾಖಂಡ ಎರಡನೇ ಇನಿಂಗ್ಸ್ನಲ್ಲಿ ಮುಂಬೈ ಬೌಲರ್ಗಳ ದಾಳಿಗೆ ತತ್ತರಿಸಿ 69 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಮುಂಬೈ ಪರ ಹಿರಿಯ ವೇಗದ ಬೌಲರ್ ಧವಳ್ಕುಲಕರ್ಣಿ(3-11), ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ(3-15) ಹಾಗೂ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್(3-13) ತಲಾ 3 ವಿಕೆಟ್ಗಳನ್ನು ಪಡೆದರು.
ಮುಂಬೈ ತನ್ನ ಮೊದಲ ಇನಿಂಗ್ಸ್ನಲ್ಲಿ ಸುವೇದ್ ಪಾರ್ಕರ್ ಚೊಚ್ಚಲ ದ್ವಿಶತಕದ(252 ರನ್)ನೆರವಿನಿಂದ 8 ವಿಕೆಟ್ ನಷ್ಟಕ್ಕೆ 647 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.







