ಪಡಿತರ ಚೀಟಿಗೆ ಇ-ಕೆವೈಸಿ: ನಿಯಮ ಸಡಿಲಿಕೆ
ಉಡುಪಿ : ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಪೋರ್ಟಿಬಿಲಿಟಿ ಮೂಲಕ ಜೂನ್ ೩೦ರೊಳಗೆ ಇ-ಕೆವೈಸಿ ಮಾಡಿಸಲು ಅಂತಿಮ ಅವಕಾಶ ಕಲ್ಪಿಸಲಾಗಿದೆ.
ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಈವರೆಗೆ ಪಡಿತರ ಆಹಾರಧಾನ್ಯ ಪಡೆಯು ತ್ತಿದ್ದ ಮೂಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇ-ಕೆವೈಸಿ ಮಾಡಲು ಇದ್ದ ನಿಯಮವನ್ನು ಸಡಿಲ ಗೊಳಿಸಲಾ ಗಿದೆ. ಇದುವರೆಗೂ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿಯ ಸದಸ್ಯರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಬೆರಳಚ್ಚು ನೊಂದಾಯಿಸಿಕೊಳ್ಳಬಹುದಾಗಿದೆ (ಆಧಾರ ದೃಢೀಕರಣ ಇ-ಕೆವೈಸಿ).
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರ ಹಾಗೂ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರು, ಅನಿಲ ಸಂಪರ್ಕದ ಮಾಹಿತಿ ಮತ್ತು ಮೊಬೈಲ್ ಸಂಖ್ಯೆಯನ್ನು ಇ-ಕೆವೈಸಿ ಮಾಡುವ ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕು.
ಸರಕಾರದ ಆದೇಶದಂತೆ ಜೂನ್ ೩೦ರ ಒಳಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿ ಮತ್ತು ಸದಸ್ಯರನ್ನು ರದ್ದು ಪಡಿಸಲು ಕ್ರಮ ವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.