ಪ್ರವಾದಿ ನಿಂದಕರಿಗೆ ತಕ್ಕ ಪಾಠ ಕಲಿಸುವೆವು: ಇರಾನ್ ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಧೋವಲ್ ಭರವಸೆ
ಇರಾನಿ ವಿದೇಶಾಂಗ ಸಚಿವಾಲಯದ ಹೇಳಿಕೆ

ಟೆಹರಾನ್,ಜೂ.9: ಪ್ರವಾದಿ ಮುಹಮ್ಮದರ ಬಗ್ಗೆ ಇಬ್ಬರು ಬಿಜೆಪಿ ನಾಯಕರು ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಉಭಯದೇಶಗಳ ನಡುವೆ ವಾಣಿಜ್ಯ, ಸಂಪರ್ಕಶೀಲತೆ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಭಾರತ ಹಾಗೂ ಇರಾನ್ ಬುಧವಾರ ವಿಸ್ತೃತವಾದ ಮಾತುಕತೆಗಳನ್ನು ನಡೆಸಿದವು.
ಪ್ರವಾದಿ ಮುಹಮ್ಮದರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿದ ಕುವೈತ್, ಕತರ್, ಯುಎಇ, ಸೌದಿ ಆರೇಬಿಯ ಹಾಗೂ ಇತರ ಗಲ್ಫ್ ರಾಷ್ಟ್ರಗಳ ಜತೆಗೆ ಇರಾನ್ ಕೂಡಾ ಸೇರ್ಪಡೆಗೊಂಡ ಕೆಲವು ದಿನಗಳ ಬಳಿಕ ಇರಾನಿ ವಿದೇಶಾಂಗ ಸಚಿವ ಹೊಸ್ಸೆನ್ ಆಮೀರ್ ಅಬ್ದೊಲ್ಲಾಹಿಯಾನ್ ಹೊಸದಿಲ್ಲಿಗೆ ಭೇಟಿ ನೀಡಿದ್ದಾರೆ.
"ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಇತರ ಭಾರತೀಯ ಅಧಿಕಾರಿಗಳು ನಮ್ಮ ದ್ವಿಪಕ್ಷೀಯ ವ್ಯೂಹಾತ್ಮಕ ಮಾತುಕತೆಗಳನ್ನು ಮುನ್ನಡೆಸಲಿದ್ದಾರೆ. ಧರ್ಮಗಳನ್ನು ಹಾಗೂ ಇಸ್ಲಾಮಿನ ಪಾವಿತ್ರವನ್ನು ಗೌರವಿಸುವ ಹಾಗೂ ವಿಭಜನವಾದಿ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸುವುದಕ್ಕೆ ಟೆಹರಾನ್ ಹಾಗೂ ಹೊಸದಿಲ್ಲಿ ಸಮ್ಮತಿಸಿವೆ. ಉಭಯದೇಶಗಳ ಬಾಂಧವ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ದೃಢ ಸಂಕಲ್ಪ ಮಾಡಲಾಗಿದೆ" ಎಂದು ಆಮೀರ್ ಅಬ್ದೊಲ್ಲಾಹಿಯಾನ್ ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಇಬ್ಬರು ಮುಖಂಡರು ಪ್ರವಾದಿಯರ ಬಗ್ಗೆ ಅಗೌರವಯುತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಳಿ ನಕಾರಾತ್ಮಕ ವಾತಾವರಣ ಉಂಟಾಗಿರುವ ಬಗ್ಗೆ ಅಬ್ದುಲ್ಲಾಹಿಯಾನ್ ಮಾತುಕತೆಯ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
‘‘ಇಸ್ಲಾಮಿನ ಸ್ಥಾಪಕರಾದ ಪ್ರವಾದಿ ಮುಹಮ್ಮದರ ಬಗ್ಗೆ ಭಾರತ ಸರಕಾರವು ಅಪಾರ ಗೌರವವನ್ನು ಹೊಂದಿದೆಯೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಮಾತುಕತೆಯ ವೇಳೆ ಮರುದೃಢಪಡಿಸಿದ್ದಾರೆ ’’ಎಂದು ಇರಾನ್‌ನವಿದೇಶಾಂಗ ಸಚಿವಾಲಯದ ಪತ್ರಿಕಾಹೇಳಿಕೆಯೊಂದು ತಿಳಿಸಿದೆ. ಇತರರು ಕೂಡಾ ಪಾಠ ಕಲಿಯುವಂತಾಗುವ ರೀತಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಧೋವಲ್ ಹೇಳಿದ್ದಾರೆಂದು ಹೇಳಿಕೆ ತಿಳಿಸಿದೆ.
ಇರಾನ್ ವಿದೇಶಾಂಗ ಸಚಿವಾಲಯದ ಈ ಹೇಳಿಕೆಯ ಬಗ್ಗೆ ಕೇಂದ್ರ ಸರಕಾರದಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲವೆಂದು ಮೂಲಗಳು ತಿಳಿಸಿವೆ.ಪ್ರವಾದಿ ಮುಹಮ್ಮದರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಭಾರತೀಯ ಜನರು ಹಾಗೂ ಸರಕಾರವನ್ನು ಇರಾನ್ ಸಚಿವರು ಪ್ರಶಂಸಿಸಿದ್ದಾರೆಂದು ಇರಾನಿ ಹೇಳಿಕೆ ತಿಳಿಸಿದೆ. ಇರಾನ್‌ನಲ್ಲಿರುವ ವಿವಿಧ ಧರ್ಮಗಳ ಅನುಯಾಯಿಗಳೊಂದಿಗೆ ಭಾರತದ ಐತಿಹಾಸಿಕ ಮೈತ್ರಿಯನ್ನು ಕೂಡಾ ಇರಾನ್ ವಿದೇಶಾಂಗ ಸಚಿವರು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.