ಪ್ರವಾದಿ ನಿಂದನೆ ಅಕ್ಷಮ್ಯ; ನುಪುರ್ ಶರ್ಮಾ, ನವೀನ್ ಜಿಂದಾಲ್ ಬಂಧನಕ್ಕೆ ಎಸ್ಡಿಪಿಐ ಒತ್ತಾಯ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತಂತೆ ನಿಂದಿಸಿ ಅಕ್ಷಮ್ಯ ಅಪರಾಧವೆಸಗಿದ ಬಿಜೆಪಿಯವರು ದೇಶದ ಮಾನವನ್ನು ಜಾಗತಿಕಮಟ್ಟದಲ್ಲಿ ಹರಾಜು ಹಾಕಿದ್ದಾರೆ ಎಂದ ಎಸ್.ಡಿ.ಪಿ.ಐ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಮುಹಮ್ಮದ್ ತೌಫಿಖ್ ಬ್ಯಾರಿ ಪ್ರವಾದಿ ನಿಂದಕರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.
ಅವರು ಗುರುವಾರ ಸಂಜೆ ಇಲ್ಲಿನ ಹಳೆ ತಹಸಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರವಾದಿ ಮುಹಮ್ಮದ್ ಪೈಗಂಬರರು ಕೇವಲ ಮುಸ್ಲಿಮರಿಗೆ ಮಾತ್ರ ಮರ್ಯಾದಾ ಪುರುಷರಲ್ಲ. ಅವರನ್ನು ಇಡಿ ಮನುಕುಲವೇ ಅತ್ಯಂತ ಗೌರವಾದಾರಗಳಿಂದ ನೋಡುತ್ತದೆ. ಪ್ರವಾದಿ ನಿಂದನೆ ಅಕ್ಷಮ್ಯ ಅಪರಾಧವಾಗಿದ್ದು ಕೂಡಲೇ ನುಪೂರ್ ಶರ್ಮಾ ಮತ್ತು ನವೀನ್ ಜಿಂದಾಲ್ ಎಂಬ ಪ್ರವಾದಿ ನಿಂದಕರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ತನ್ನ ದ್ವೇಷರಾಜಕಾರಣ ಬಿಡಬೇಕು. ಜನರಿಗೆ ಅವಶ್ಯಕತೆ ಇಲ್ಲದಂತಹ ಕಾನೂನು ಜಾರಿಗೊಳಿಸಿ ಜನಸಾಮಾನ್ಯರಿಗೆ ಹಿಂಸಿಸುವುದನ್ನು ನಿಲ್ಲಿಸಬೇಕು, ಕಳೆದ ಎಂಟು ವರ್ಷಗಳಿಂದ ಇದನ್ನೇ ಮಾಡುತ್ತ ಬಂದಿರುವ ಬಿಜೆಪಿ ಸರ್ಕಾರವನ್ನು ಕೂಡಲೆ ವಿಸರ್ಜಿಸಬೇಕು ಎಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸೀಮ್ ಮನೆಗಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಝೈನುದ್ದೀನ್, ಭಟ್ಕಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಾಖಿಬ್, ಕಾರ್ಯದರ್ಶಿ ರಫೀಖ್ ಮತ್ತಿತರರು ಭಾಗವಹಿಸಿದ್ದರು.







