ಅಮೆರಿಕ: ಬಂದೂಕು ನಿಯಂತ್ರಣ ಮಸೂದೆ ಅಂಗೀಕರಿಸಿದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್

PHOTO CREDIT: AFP
ವಾಶಿಂಗ್ಟನ್, ಜೂ. 9: ನಾಗರಿಕರಿಗೆ ಬಂದೂಕುಗಳನ್ನು ಮಾರಾಟ ಮಾಡುವುದನ್ನು ನಿಯಂತ್ರಿಸುವ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ ಅಂಗೀಕರಿಸಿದೆ. ಈ ಕಾನೂನು ಬಂದೂಕುಗಳನ್ನು ಖರೀದಿಸುವ ವಯಸ್ಸನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುತ್ತದೆ ಎಂದು ‘ಅಸೋಸಿಯೇಟಡ್ ಪ್ರೆಸ್’ ವರದಿ ಮಾಡಿದೆ. ದೇಶದಲ್ಲಿ ಬಂದೂಕುಗಳ ಕಳ್ಳಸಾಗಣೆ ಮಾಡುವುದು ಮತ್ತು ಅತಿ ಸಾಮರ್ಥ್ಯದ ಮ್ಯಾಗಝಿನ್ (ಗುಂಡುಗಳು)ಗಳನ್ನು ಮಾರಾಟ ಮಾಡುವುದನ್ನೂ ಮಸೂದೆಯು ಫೆಡರಲ್ ಅಪರಾಧಗಳನ್ನಾಗಿಸಿದೆ.
‘ಪ್ರೊಟೆಕ್ಟಿಂಗ್ ಅವರ್ ಕಿಡ್ಸ್ ಆ್ಯಕ್ಟ್’ (ನಮ್ಮ ಮಕ್ಕಳನ್ನು ರಕ್ಷಿಸುವ ಕಾಯ್ದೆ)ಯನ್ನು 223-204 ಮತಗಳ ಅಂತರದಿಂದ ಅಂಗೀಕರಿಸಲಾಗಿದೆ. ಮಸೂದೆಯ ಪರವಾಗಿ ಐವರು ರಿಪಬ್ಲಿಕನ್ ಸಂಸದರೂ ಮತ ಚಲಾಯಿಸಿದ್ದಾರೆ. ಅದೇ ವೇಳೆ, ಇಬ್ಬರು ಡೆಮಾಕ್ರಟಿಕ್ ಸಂಸದರು ಮಸೂದೆಯ ವಿರುದ್ಧವಾಗಿ ಮತ ಹಾಕಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ಸರಕಾರವಿದೆ.
ಆದರೆ, ಅಮೆರಿಕದ ಇನ್ನೊಂದು ಶಾಸನ ಸಭೆಯಾಗಿರುವ ಸೆನೆಟ್ನಲ್ಲಿ ಈ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ. ಯಾಕೆಂದರೆ ಆ ಸದನದಲ್ಲಿ 50 ಡೆಮಾಕ್ರಟಿಕ್ ಸಂಸದರು ಮತ್ತು ಅಷ್ಟೇ ಸಂಖ್ಯೆಯ ಪ್ರತಿಪಕ್ಷ ರಿಪಬ್ಲಿಕನ್ ಸಂಸದರು ಇದ್ದಾರೆ. ಹೆಚ್ಚಿನ ಮಸೂದೆಗಳು ಅಂಗೀಕಾರಗೊಳ್ಳಲು 60 ಮತಗಳ ಅಗತ್ಯವಿದೆ. ಹಾಗಾಗಿ, ವಿವಾದಾಸ್ಪದ ಮಸೂದೆಗಳು ಸೆನೆಟ್ನಲ್ಲಿ ಅಂಗೀಕಾರಗೊಳ್ಳುವುದು ಕಷ್ಟ.
ಮೇ 14ರಂದು ನ್ಯೂಯಾರ್ಕ್ನ ಬಫೇಲೊ ಮತ್ತು ಮೇ 24ರಂದು ಟೆಕ್ಸಾಸ್ನ ಉವಾಲ್ಡ್ನಲ್ಲಿ ನಡೆದ ಹತ್ಯಾಕಾಂಡಗಳ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ತುರ್ತಾಗಿ ಮಂಡಿಸಲಾಗಿದೆ.ದೇಶವು ಬಯಸಿರುವಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬಂದೂಕು ನಿಯಂತ್ರಣ ಕಾನೂನುಗಳನ್ನು ರೂಪಿಸುತ್ತಿದೆ ಎಂದು ಮಸೂದೆ ಕುರಿತ ಚರ್ಚೆಯ ವೇಳೆ ಡೆಮಾಕ್ರಟಿಕ್ ಸಂಸದೆ ವೆರೋನಿಕಾ ಎಸ್ಕೋಬಾರ್ ಹೇಳಿದರು. ಮಕ್ಕಳು ನಿರಂತರ ಭಯದಲ್ಲೇ ಬದುಕಬೇಕಾಗಿರುವುದು ಅಸ್ವೀಕಾರಾರ್ಹ ಎಂದು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದರು.
ಇದಕ್ಕೂ ಮೊದಲು, ಹೌಸ್ ಸಮಿತಿಯು 11 ವರ್ಷದ ಬಾಲಕಿಯೊಬ್ಬಳ ಹೇಳಿಕೆಯನ್ನು ದಾಖಲಿಸಿತು. ಆ ಬಾಲಕಿಯು ಉವಾಲ್ಡ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡು ಹಾರಾಟದ ವೇಳೆ ತನ್ನ ಮೃತ ಸಹಪಾಠಿಯ ರಕ್ತವನ್ನು ದೇಹಕ್ಕೆ ಹಚ್ಚಿಕೊಂಡು ತನ್ನನ್ನು ತಾನು ರಕ್ಷಿಸಿಕೊಂಡಿದ್ದಳು.