ಜಾರ್ಖಂಡ್: ಬಾಲಕಿಯ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ ಬೆಂಕಿ ಹಚ್ಚಿದ ಗ್ರಾಮಸ್ತರು
ರಾಂಚಿ, ಜೂ. 9: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ಕುಟುಂಬಿಕರು ಹಾಗೂ ಗ್ರಾಮಸ್ಥರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.
ಮೊದಲು ಆರೋಪಿಗಳಿಗೆ ಸಂತ್ರಸ್ತ ಬಾಲಕಿಯ ಕುಟುಂಬ ಬರ್ಬರವಾಗಿ ಥಳಿಸಿತು. ಅನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿತು. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಾಲಕಿ ತನ್ನ ಕುಟುಂಬದೊಂದಿಗೆ ಸಮೀಪದ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡು ಹಿಂದಿರುಗುವ ಸಂದರ್ಭ ಈ ಘಟನೆ ನಡೆದಿದೆ. ಬಸ್ ಇರಲಿಲ್ಲ. ಆದುದರಿಂದ ಬಾಲಕಿಯ ತಂದೆ ಬೈಕ್ ನಲ್ಲಿ ತೆರಳುತ್ತಿದ್ದ ತಮ್ಮ ಗ್ರಾಮದವರೇ ಆದ ಇಬ್ಬರು ವ್ಯಕ್ತಿಗಳಲ್ಲಿ ಬಾಲಕಿಯನ್ನು ಮನೆಗೆ ಬಿಡುವಂತೆ ವಿನಂತಿಸಿದ್ದರು. ಆದರೆ, ಇಬ್ಬರು ಆರೋಪಿಗಳು ಮನೆಗೆ ಬಿಡುವ ಮುನ್ನ ದಾರಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಘಟನೆ ಬಗ್ಗೆ ತಿಳಿಸಿದಾಗ ಆಕ್ರೋಶಿತರಾದ ಕುಟುಂಬದವರು ಅವರಿಬ್ಬರನ್ನು ಹಿಡಿದು ಥಳಿಸಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಓರ್ವ ಸಾವನ್ನಪ್ಪಿದ್ದಾನೆ. ಗಂಭೀರ ಗಾಯಗೊಂಡ ಇನ್ನೋರ್ವ ರಾಂಚಿಯಲ್ಲಿರುವ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಆರ್ಐಎಂಎಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.