ಶ್ರೀಲಂಕಾ: ವಿದ್ಯುತ್ ಕಾರ್ಮಿಕರ ಮುಷ್ಕರ; ದೇಶಾದ್ಯಂತ ವಿದ್ಯುತ್ ಕಡಿತ

PHOTO CREDIT: AP
ಕೊಲಂಬೊ, ಜೂ. 9: ಸರಕಾರದ ಹೊಸ ನಿಯಮಾವಳಿಗಳನ್ನು ವಿರೋಧಿಸಿ ವಿದ್ಯುತ್ ಕ್ಷೇತ್ರದ ಕಾರ್ಮಿಕ ಸಂಘಟನೆಯೊಂದು ಮುಷ್ಕರ ನಡೆಸಿರುವ ಹಿನ್ನೆಲೆಯಲ್ಲಿ, ದೇಶದ ಹೆಚ್ಚಿನ ಭಾಗಗಳನ್ನು ವಿದ್ಯುತ್ ಕಡಿತ ಬಾಧಿಸುತ್ತಿದೆ. ದೇಶವು ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ವಿದ್ಯುತ್ ಕಡಿತವು ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.
ಶ್ರೀಲಂಕಾದ ಪ್ರಮುಖ ವಿದ್ಯುತ್ ಪೂರೈಕೆ ಕಂಪೆನಿ, ಸರಕಾರಿ ಒಡೆತನದ ಸಿಲೋನ್ ಇಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ)ನ ಸುಮಾರು 1,100 ಇಂಜಿನಿಯರ್ ಗಳ ಪೈಕಿ ಸುಮಾರು 900 ಇಂಜಿನಿಯರ್ ಗಳು ಬುಧವಾರ ಮಧ್ಯರಾತ್ರಿಯಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಸುಮಾರು 1,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ 8 ಜಲವಿದ್ಯುತ್ ಸ್ಥಾವರಗಳು ಸ್ಥಗಿತಗೊಂಡಿವೆ.
ದೇಶದ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರುವ ಸರಕಾರದ ಯೋಜನೆಯನ್ನು ಸಿಇಬಿ ಇಂಜಿನಿಯರ್ ಗಳ ಯೂನಿಯನ್ ವಿರೋಧಿಸುತ್ತಿದೆ. ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಿಗಾಗಿ ಸಲ್ಲಿಸುವ ಸ್ಪರ್ಧಾತ್ಮಕ ಬಿಡ್ಡಿಂಗ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು ತಿದ್ದುಪಡಿಯಲ್ಲಿ ಸೇರಿದೆ.