ಸಿಬ್ಬಂದಿ ಕೊರತೆ ಬಗ್ಗೆ ರಾಜ್ಯ ಪ್ರಾಧಿಕಾರಕ್ಕೆ ವರದಿ: ಶಾಂತವೀರ ಶಿವಪ್ಪ
ನ್ಯಾಯಾಧೀಶರಿಂದ ಜಿಲ್ಲಾಸ್ಪತ್ರೆಯ ಕುಂದುಕೊರತೆ ಪರಿಶೀಲನೆ
ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ರಾಗಿರುವ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಶುಕ್ರವಾರ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಧೀಡಿರ್ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು, ರೋಗಿ ಗಳಿಗೆ ನೀಡುವ ಸೇವೆಯ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿಂದ ಡಯಾ ಲೀಸಿಸ್ ಕೇಂದ್ರಕ್ಕೆ ತೆರಳಿದ ಅವರು, ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತವೀರ ಶಿವಪ್ಪ, ಆಸ್ಪತ್ರೆಗೆ ಆಸ್ಪತ್ರೆಯಲ್ಲಿನ ಕುಂದು ಕೊರತೆ ಹಾಗೂ ವೈದ್ಯರ ಸೇವೆ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಯಾವುದೇ ಮಾಹಿತಿ ನೀಡದೆ ಧೀಡಿರ್ ಭೇಟಿ ನೀಡಿದ್ದೇವೆ. ರಾಜ್ಯ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿ ತಿಂಗಳು ಆಸ್ಪತ್ರೆಗೆ ಭೇಟಿ ನೀಡಿ ವರದಿ ನೀಡಬೇಕು. ಆಸ್ಪತ್ರೆಯ ಎಲ್ಲ ವಾರ್ಡ್‌ಗಳಿಗೆ, ಡಯಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಸಿಬ್ಬಂದಿ ಕೊರತೆ ಮಧ್ಯೆಯೂ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ ಎಂದರು.
ಡಯಲೀಸಿಸ್ ಕೇಂದ್ರದಲ್ಲಿ ಸ್ಥಳದ ಕೊರತೆ ಇದ್ದು, ಮುಂದೆ ಹೊಸದಾಗಿ ನಿರ್ಮಾಣವಾಗುತ್ತಿರುವ ೨೫೦ ಬೆಡ್‌ಗಳ ಆಸ್ಪತ್ರೆಯಲ್ಲಿ ವಿಶಾಲ ಸ್ಥಳದಲ್ಲಿ ಈ ಕೇಂದ್ರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ರಾಜ್ಯ ಸರಕಾರ ವಶಕ್ಕೆ ಪಡೆದುಕೊಂಡಿದೆ. ಅಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡು ಸರಕಾರ ಆಸ್ಪತ್ರೆ ಯನ್ನು ಮುನ್ನಡೆಸಲಿದೆ ಎಂದು ಅವರು ತಿಳಿಸಿದರು.
ಸ್ಥಳಾವಕಾಶ ಮತ್ತು ಸಿಬ್ಬಂದಿಗಳ ಕೊರತೆಯೇ ಇಲ್ಲಿನ ಮುಖ್ಯ ಸಮಸ್ಯೆ ಯಾಗಿದೆ. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು. ಅಲ್ಲಿಂದ ಸರಕಾರಕ್ಕೆ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ವೈದ್ಯಾಧಿಕಾರಿಗಳಾದ ಡಾ.ಚಂದ್ರಶೇಖರ್ ಅಡಿಗ, ಡಾ.ಸುಭಾಶ್ ಕಿಣಿ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.