ಮಳಲಿ ಮಸೀದಿ ವಿವಾದ; ಜೂ.14ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಮಂಗಳೂರು: ಮಳಲಿ ಮಸೀದಿ ವಿವಾದ ವಿಚಾರಣೆಯನ್ನು ಮೂರನೇ ಸಿವಿಲ್ ನ್ಯಾಯಾಲಯ ಜೂ.14ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಗುರುವಾರ ವಾದ ಮಂಡಿಸಿದ್ದ ವಿಶ್ವ ಹಿಂದೂ ಪರಿಷತ್ ಪರ ವಕೀಲರು, ಮಳಲಿ ಪೇಟೆ ಮಸೀದಿ ವಕ್ಫ್ ಆಸ್ತಿ ಎಂದು ಹೇಳಿದರೆ ಸಾಲದು ಅದಕ್ಕೆ ಪೂರಕ ಸಾಕ್ಷಿಗಳನ್ನು ನ್ಯಾಯಾಲಯದ ಮುಂದಿರಿಸಿ ತನಿಖೆ ನಡೆಸಿ ನ್ಯಾಯಾಲಯ ತೀರ್ಪು ನೀಡಿದರೆ ಒಪ್ಪಬಹುದು. ಮಸೀದಿಗೂ ವಕ್ಫ್ ಆಸ್ತಿಗೂ ಸಂಬಂಧವಿಲ್ಲ ಎಂದು ವಾದಿಸಿದ್ದರು.
ಆ ಸಂಬಂಧ ಇಂದು ವಾದ ಮಂಡಿಸಿದ ಮಸೀದಿ ಪರ ವಕೀಲರು, ಪ್ರಕರಣವೊಂದರ ಸಂಬಂಧ ದಿಲ್ಲಿ ನ್ಯಾಯಾಲಯವು ನೀಡಿದ್ದ ತೀರ್ಪೊಂದರಲ್ಲಿ ಹೇಳಿದಂತೆ, ರಾಜ್ಯ ಸರಕಾರ ನೀಡುವ ಗೆಜೆಟ್ ನೋಟಿಫಿಕೇಶನ್ ಅಂದರೆ ಅದು ನ್ಯಾಯಾಲಯದ ಆದೇಶಕ್ಕೆ ಸಮನಾಗಿದೆ. ಆದ್ದರಿಂದ ಮಸೀದಿ ವಕ್ಫ್ ಆಸ್ತಿಯೋ ಅಲ್ಲವೇ ಎಂಬ ಬಗ್ಗೆ ತನಿಖೆ ನಡೆಸುವ ಅವಶ್ಯಕತೆ ಇಲ್ಲ. ಅಲ್ಲದೇ, ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಒಂದೆಡೆ ಮಸೀದಿಯ ರಚನೆ, ಅದರಲ್ಲಿ ಅದಕ್ಕೆ ಸಂಬಂಧಿಸಿದ ಕಾರ್ಯಗಳು ನಡೆಯುತ್ತಿದ್ದರೆ, ಅದು ವಕ್ಫ್ ಆಸ್ತಿಯಾಗಿ ಪರಿವರ್ತನೆಯಾಗುತ್ತದೆ ಎಂದು ವಾದ ಮಂಡಿಸಿದರು.
ಮಳಲಿ ಪೇಟೆ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಜಾಗದಲ್ಲಿರುವುದು ಮಸೀದಿ ಎಂದು ಎದುರು ಕಕ್ಷಿಯ ಅರ್ಜಿದಾರರು ಒಪ್ಪಿದ್ದಾರೆ. ಆದೂದರಿಂದ ಅದು ವಕ್ಫ್ ಆಸ್ತಿ ಎನ್ನುವುದನ್ನು ಮತ್ತೆ ತನಿಖೆ ನಡೆಸಿ ಸಾಬೀತು ಪಡಿಸುವ ಆವಶ್ಯಕತೆ ಇಲ್ಲ ಎಂದು ಮಸೀದಿ ಪರ ವಾದ ಮಂಡಿಸಿರು.
ಬಳಿಕ ವಾದಿಸಿದ ವಿಹಿಂಪ ಪರವಕೀಲರು, ಮಸೀದಿ ಪರ ವಕೀಲರು ಹೊಸ ವಿವಾದ ಹಾಗೂ ಪಾಯಿಂಟ್ ಗಳನ್ನು ಮುಂದಿಟ್ಟಿದ್ದಾರೆ. ಆದ್ದರಿಂದ ಆ ಕುರಿತು ವಾದಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.
ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂ. 14ಕ್ಕೆ ಮುಂದೂಡಿತು.
ಮಸೀದಿ ವಿರುದ್ಧ ಮತ್ತೊಂದು ಅರ್ಜಿ ದಾಖಲು
ಮಳಲಿ ಪೇಟೆ ಮಸೀದಿ ನವೀಕರಣದ ಸಂದರ್ಭ ದೇವಸ್ಥಾನವಿದೆ ಎಂದು ಆರೋಪಿಸಿ, ಸ್ಥಳೀಯರಾದ ದನಂಜಯ ಮತ್ತು ಮನೋಜ್ ಕುಮಾರ್ ಎಂಬವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಈ ಸಂಬಂಧ ಮಂಗಳೂರಿನ 3ನೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಂತೆಯೇ, ಎಸಿ ನ್ಯಾಯಾಲಯದಲ್ಲಿ ಹೊಸ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಮಳಲಿ ಮಸೀದಿಗೆ ಸಂಬಂಧಿಸಿದ ಆರ್ ಟಿಸಿ ಸರಿಯಾದ ಕ್ರಮದಲ್ಲಿಲ್ಲ. ಅದನ್ನು ಅಕ್ರಮವಾಗಿ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದ್ದು, ಈ ಪ್ರಕರಣದ ವಿಚಾರಣೆಯೂ ಜೂ.14 ರಂದು ಎಸಿ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.