ಮಂಗಳೂರು ಪೊಲೀಸ್ ಶ್ವಾನದಳಕ್ಕೂ ಬಂತು ‘ಚಾರ್ಲಿ’!
3 ತಿಂಗಳ ಪೊಲೀಸ್ ಶ್ವಾನಕ್ಕೆ ನಾಮಕರಣ

ಮಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ೭೭೭ ಚಾರ್ಲಿ ಸಿನೆಮಾ ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಯಾಗಿ ಭಾರೀ ಸುದ್ದಿಯಲ್ಲಿರುವಂತೆಯೇ ಮಂಗಳೂರಿನ ಪೊಲೀಸ್ ಕಮಿಷನರೇಟ್ ಕಚೇರಿ ಶ್ವಾನದಳಕ್ಕೆ ಪುಟಾಣಿ ‘ಚಾರ್ಲಿ’ಯ ಆಗಮನವಾಗಿದೆ.
ಸುಮಾರು ೩ ತಿಂಗಳ ಲ್ಯಾಬ್ರೊಡಾರ್ ರಿಟ್ರೀವರ್ ಜಾತಿಯ ಶ್ವಾನವು ಒಂದು ತಿಂಗಳ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಿಎಆರ್ (ನಗರ ಸಶಸ್ತ್ರ ಮೀಸಲು ಪಡೆ) ವಿಭಾಗಕ್ಕೆ ಖರೀದಿಸಲಾಗಿತ್ತು. ಪ್ರಸ್ತುತ ಮೂರು ತಿಂಗಳ ಶ್ವಾನಕ್ಕೆ ಇಂದು ಸಿಎಎಆರ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾರ್ಲಿ ಎಂದು ನಾಮಕರಣ ಮಾಡುವ ಕಾರ್ಯಕ್ರಮ ನಡೆಯಿತು.
ಸಿಎಆರ್ ವಿಭಾಗದ ಎಸಿಪಿಗಳಾದ ಎಂ. ಉಪಾಸೆ, ಚೆನ್ನವೀರಪ್ಪ ಹಡಪದ್ ಉಪಸ್ಥಿತರಿದ್ದು, ಪುಟಾಣಿ ಚಾರ್ಲಿಗೆ ಹೂಹಾರ ಹಾಕಿ ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ನಾಮಕರಣ ಮಾಡಿದರು.
‘‘ನಿನ್ನೆ ೭೭೭ ಚಾರ್ಲಿ ಚಲನಚಿತ್ರದ ಪ್ರೀಮಿಯರ್ ಶೋ ನೋಡಿದ ಬಳಿಕ ನಮ್ಮ ಶ್ವಾನದಳಕ್ಕೆ ಸೇರ್ಪಡೆಗೊಂಡಿರುವ ಪುಟಾಣಿ ಶ್ವಾನಕ್ಕೂ ಚಾರ್ಲಿ ಎಂದು ಹೆಸರಿಡಲು ನಾವು ಬಯಸಿದೆವು. ಈ ಬಗ್ಗೆ ಪೊಲೀಸ್ ಆಯುಕ್ತರನ್ನು ಕೇಳಿದಾಗ ಅವರು ಒಪ್ಪಿಗೆ ನೀಡಿದರು. ಆ ಹಿನ್ನೆಲೆಯಲ್ಲಿ ಇಂದು ಸರಳ ಕಾರ್ಯಕ್ರಮದ ಮೂಲಕ ನಮ್ಮ ವಿಭಾಗದ ಹೊಸ ಸದಸ್ಯೆಯಾಗಿ ಸೇರ್ಪಡೆಗೊಂಡಿರುವ ಪುಟಾಣಿಗೆ ನಾವು ಚಾರ್ಲಿ ಎಂದು ನಾಮಕರಣ ಮಾಡಿದ್ದೇವೆ. ೭೭೭ ಚಾರ್ಲಿ ಚಲನಚಿತ್ರವು ಮನುಷ್ಯ ಮತ್ತು ಶ್ವಾನದ ನಡುವಿನ ಬಾಂಧವ್ಯವನ್ನು ತೋರ್ಪಡಿಸಿದೆ’’ ಎಂದು ಚಾರ್ಲಿಯ ಯೋಗ ಕ್ಷೇಮ, ತರಬೇತಿಯ ಮೇಲ್ವಿಚಾರಣೆಯನ್ನು ವಹಿಸಲಿರುವ ಸಿಎಆರ್ ವಿಭಾಗದ ಸಿಬ್ಬಂದಿ ಹರೀಶ್ ತಿಳಿಸಿದ್ದಾರೆ.
ಮಂಗಳೂರು ಸಿಎಆರ್ ವಿಭಾಗದ ಶ್ವಾನದಳವು ಈಗಾಗಲೇ ರಾಣಿ, ಗೀತಾ, ಬಬ್ಲಿ ಹಾಗೂ ರೂಬಿ ಹೆಸರಿನ ನಾಲ್ವರನ್ನು ಹೊಂದಿದೆ. ಇದೀಗ ಚಾರ್ಲಿ ಹೊಸ ಸೇರ್ಪಡೆಯಾಗಿದ್ದು, ಚಾರ್ಲಿ ಮುಂದಿನ ಸುಮಾರು ಏಳು ತಿಂಗಳ ತರಬೇತಿಯನ್ನು ಬೆಂಗಳೂರಿನ ಅಡುಗೋಡಿ ಸಿಆರ್ ಸೌತ್ ವಿಭಾಗದಲ್ಲಿ ಪಡೆದ ಬಳಿಕ ಬಾಂಬ್ ನಿಷ್ಕ್ರಿಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಿದೆ. ಬಂಟ್ವಾಳದಿಂದ ೨೦೦೦೦ ರೂ. ನೀಡಿ ಚಾರ್ಲಿಯನ್ನು ಒಂದು ತಿಂಗಳ ಹಿಂದೆ ಖರೀದಿಸಲಾಗಿದೆ ಎಂದು ಎಂ. ಉಪಾಸೆ ತಿಳಿಸಿದರು.
ಪೊಲೀಸ್ ಶ್ವಾನಗಳಿಗೂ ಇದೆ ಇನ್ಸೂರೆನ್ಸ್!
ಪೊಲೀಸ್ ಶ್ವಾನಗಳಿಗೆ ತಲಾ ೩೦೦ ರೂ.ನಂತೆ ದಿನಕ್ಕೆ ಆಹಾರ ಖರ್ಚು ವೆಚ್ಚಕ್ಕೆ ಅನುದಾನ ಪೊಲೀಸ್ ಇಲಾಖೆಯಿಂದ ದೊರೆಯುತ್ತಿರುವುದಲ್ಲದೆ, ಪ್ರತ್ಯೇಕ ವಿಮಾ ಸೌಲಭ್ಯವೂ ಇದೆ. ಸರಕಾರಿ ಸೌಮ್ಯದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಡಿ ಪೆಟ್ ಡಾಗ್ ಇನ್ಸೂರೆನ್ಸ್ ಕೂಡಾ ಪ್ರತಿ ಶ್ವಾನಕ್ಕೂ ವಾರ್ಷಿಕ ವಿಮೆ ಪಾವತಿ ಮಾಡಲಾಗುತ್ತದೆ. ಮಾತ್ರವಲ್ಲದೆ, ದಳದ ಪ್ರತಿಯೊಂದು ಶ್ವಾನಕ್ಕೂ ಇಂತಿಷ್ಟು ಪ್ರಮಾಣದದಲ್ಲಿ ಪ್ರತಿದಿನ ಮಾಂಸಾಹಾರವನ್ನು ನೀಡಲಾಗುತ್ತದೆ. ಈ ಬಗ್ಗೆ ಪ್ರತ್ಯೇಕ ಖರ್ಚುವೆಚ್ಚಗಳ ಸಮಗ್ರ ಮಾಹಿತಿಯನ್ನೂ ಶ್ವಾನದಳ ಹೊಂದಿದೆ.
ಮಂಗಳೂರು ಶ್ವಾನದಳದ ಗೀತಾ ಹೆಸರಿನ ಲ್ಯಾಬ್ರೊಡಾರ್ (ರಿಟ್ರೀವರ್) ಕಳೆದ ಸುಮಾರು ೧೨ ವರ್ಷಗಳಿಂದ ಬಾಂಬ್ ನಿಷ್ಕ್ರಿಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗೀತಾಳ ಜತೆ ರಾಣಿಯೂ ಬಾಂಬ್ ನಿಷ್ಕ್ರಿಯ ವಿಭಾಗದ ಶ್ವಾನವಾಗಿದ್ದರೆ, ರೂಬಿ ಮತ್ತು ಬಬ್ಲಿ ಅಪರಾಧ ವಿಭಾಗದ ಪತ್ತೆ ಕಾರ್ಯದಲ್ಲಿ ಪೊಲೀಸರಿಗೆ ಸಹಕರಿಸುತ್ತಿದ್ದಾರೆ. ಈ ಎಲ್ಲಾ ಶ್ವಾನಗಳ ಪ್ರತಿ ತಿಂಗಳು ಆರೋಗ್ಯ ತಪಾಸಣೆ, ಆರು ತಿಂಗಳಿಗೊಮ್ಮೆ ಇವುಗಳ ಮೋಶನ್ ಚೆಕ್‌ಅಪ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಇವುಗಳು ಆರೋಗ್ಯವಂತಾಗಿರುವ ನಿಟ್ಟಿನಲ್ಲಿ ಇವರ ಮೇಲ್ವಿಚಾರಣೆ ನೋಡಿಕೊಳ್ಳಲು ಸಿಬ್ಬಂದಿಯೂ ಇದ್ದಾರೆ.
"ಪೊಲೀಸ್ ಶ್ವಾನ ದಳಕ್ಕೆ ಒಂದು ತಿಂಗಳ ಹಿಂದೆ ಸೇರ್ಪಡೆಯಾಗಿರುವ ಸದಸ್ಯೆಗೆ ಚಾರ್ಲಿ ನಾಮಕರಣ ಮಾಡು ವಂತೆ ನಿನ್ನೆ ವಿಭಾಗದ ಸಿಬ್ಬಂದಿ ಆಗ್ರಹಿಸಿದ್ದು, ಅದಕ್ಕೆ ಒಪ್ಪಿಗೆ ನೀಡಿರುವಂತೆ ಇಂದು ನಾಮಕರಣ ಮಾಡಿದ್ದಾರೆ. ನಿನ್ನೆ ಚಾರ್ಲಿ ಸಿನೆಮಾದ ಪ್ರೀಮಿಯರ್ ಶೋ ನೋಡಿದ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಶ್ವಾನದಳದಲ್ಲಿ ಸುಮಾರು ೧೨ ವರ್ಷಗಳಿಂದ ಹ್ಯಾಂಡ್ಲರ್ ಆಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಶ್ವಾನಗಳ ಜತೆ ನಿಕಟವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಶ್ವಾನಕ್ಕೆ ತರಬೇತಿ ವೇಳೆ ಅವರಿಗೂ ತರಬೇತಿ ನೀಡಲಾಗುತ್ತದೆ".
*ಎನ್. ಶಶಿಕುಮಾರ್, ಆಯುಕ್ತರು, ಮಂಗಳೂರು ಪೊಲೀಸ್.