ಉದ್ದಿಮೆ ಪರವಾನಿಗೆ ನವೀಕರಿಸಿಕೊಳ್ಳಲು ಜೂನ್ ಅಂತ್ಯದೊಳಗೆ ಅವಕಾಶ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸಲು ಪರವಾನಿಗೆ ಕಡ್ಡಾಯ ವಾಗಿದೆ. ಅಲ್ಲದೆ ಅದನ್ನು ಮಾರ್ಚ್ ಅಂತ್ಯದೊಳಗೆ ಕಡ್ಡಾಯವಾಗಿ ನವೀಕರಣ ಮಾಡಿಸಬೇಕು. ನಂತರದ ಪರವಾನಿಗೆಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಮನಪಾ ಪ್ರಕಟನೆ ತಿಳಿಸಿದೆ.
ಉದ್ದಿಮೆದಾರರಿಗೆ ಹೊಸದಾಗಿ ಪರವಾನಿಗೆ ಪಡೆಯಲು ಮತ್ತು ನವೀಕರಿಸಲು ಅನುಕೂಲವಾಗುವಂತೆ ಉದ್ದಿಮೆ ಪರವಾನಿಗೆಯ ಆನ್‌ಲೈನ್ ಸಾಫ್ಟ್‌ವೇರ್ ಸಿಸ್ಟಮ್ ಆಪ್ಲಿಕೇಶನ್‌ನ್ನು ಅಭಿವೃದ್ಧಿಪಡಿಸಲಾಗಿದೆ. ೨೦೨೨-೨೩ನೇ ಸಾಲಿನಲ್ಲಿ ೧೭,೧೧೯ ಉದ್ದಿಮೆ ಪರವಾನಿಗೆ ನವೀಕರಣಗೊಂಡಿರುತ್ತದೆ.ಉಳಿದ ಎಲ್ಲಾ ಉದ್ದಿಮೆದಾರರು ಅನಧಿಕೃತವಾಗಿ ಉದ್ದಿಮೆ ನಡೆಸುತ್ತಿರುವ ಬಗ್ಗೆ ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಇದರಿಂದ ಪಾಲಿಕೆಗೆ ಆರ್ಥಿಕ ನಷ್ಟವೂ ಉಂಟಾಗುತ್ತಿದೆ. ಹಾಗಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ದಿಮೆದಾರರು ಜೂ.೩೦ ರೊಳಗೆ ಕಡ್ಡಾಯವಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ನವೀಕರಿಸಲು ಅಂತಿಮ ಅವಕಾಶ ನೀಡಲಾಗಿದೆ. ತಪ್ಪಿದಲ್ಲಿ ಎಲ್ಲಾ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪರವಾನಿಗೆಯಿಲ್ಲದೆ ಉದ್ದಿಮೆ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರತಲ್ಲಿ ಸಾರ್ವಜನಿಕರು ಪಾಲಿಕೆಯ ವಾಟ್ಸ್‌ಆ್ಯಪ್ ಸಂಖ್ಯೆ: ೯೪೪೯೦೦೭೭೨೨ ಅಥವಾ ಪಾಲಿಕೆಯ ಸಹಾಯವಾಣಿ ಸಂಖ್ಯೆ: ೦೮೨೪-೨೨೨೦೩೦೬ಕ್ಕೆ ತಿಳಿಸಬಹುದು ಎಂದು ಮನಪಾ ಆಯುಕ್ತರು ತಿಳಿಸಿದ್ದಾರೆ.