ಕಾರ್ಯಕರ್ತರ ನಂಬಿಕೆಯೇ ಸಂಘಟನೆಯ ಶಕ್ತಿ : ಕೋಟ ಶ್ರೀನಿವಾಸ ಪೂಜಾರಿ

ಕಾರ್ಕಳ : ಭಾರತದ ಹಳ್ಳಿಯಲ್ಲಿರುವ ಪ್ರತೀ ರೈತರ ಪಡಿತರ ಚೀಟಿ ಯಾವುದೇ ಆಗಿದ್ದರೂ ಕಿಸಾನ್ ಸಮ್ಮಾನ್ ಯೋಜನೆಗೆ ಅವರು ಯೋಗ್ಯರಾಗಿರುತ್ತಾರೆ ಎಂದು ಹಿಂದುಳಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜೂ. 10ರಂದು ಭಾರತೀಯ ಜನತಾ ಪಾರ್ಟಿ ಮಂಡಲದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅರ್ಜಿಯನ್ನು ಕೊಡದೇ ರೈತರ ಖಾತೆಗೆ ನೇರವಾಗಿ ಸರಕಾರ ನೀಡುತ್ತಿರುವ 10 ಸಾವಿರ ರೂ. ಜಮಾ ಆಗುತ್ತಿದೆ. ರೈತರ ಮಕ್ಕಳಿಗೆ ನೀಡುವಂತಹ ವಿದ್ಯಾರ್ಥಿ ವೇತನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯಾಗಿದೆ. ಬಡವರ ಕಲ್ಯಾಣ ಯೋಜನೆಯ ಕಲ್ಪನೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ಕಾರ್ಯಕರ್ತರ ತಂಡ ಕೆಲಸವನ್ನು ಮಾಡುತ್ತಿದೆ. ಇದರಿಂದ ಸರಕಾರದ ಯೋಜನೆ ಉಜ್ವಲವಾಗುತ್ತಿದೆ. ಸರಕಾರದ ಮೇಲಿರುವ ಕಾರ್ಯಕರ್ತರ ನಂಬಿಕೆಯೇ ಸಂಘಟನೆಯ ಶಕ್ತಿ ಎಂದವರು ಹೇಳಿದರು.
ಪಠ್ಯ ಪರಿಷ್ಕರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ರೋಹಿತ್ ಚಕ್ರವರ್ತಿ ನೇತೃತ್ವದಲ್ಲಿ ಪಠ್ಯ ರಚನೆಗಲ್ಲ, ಪರಿಷ್ಕರಣೆಗೆ ಸಮಿತಿ ನೇಮಕವಾಗಿತ್ತು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಾದ ಎಲ್ಲಾ ಗೊಂದಲಗಳಿಗೆ ಸರಕಾರ ತೆರೆ ಎಳೆದಿದೆ. ವಿದ್ಯಾರ್ಥಿಗಳಿಗೆ ಪೂರಕವಾದಂತಹ ಪಠ್ಯಗಳನ್ನೇ ಸೇರಿಸಲಾಗಿದೆ. ಆರ್‌ಎಸ್‌ಎಸ್ ಸಂಘಟನೆಯನ್ನು ಕಟ್ಟಿ ಬೆಳೆಸಿದಂತಹ ಹೆಡ್ಗೇವಾರ್ ಅವರ ಪಠ್ಯವನ್ನು ಸೇರಿಸಿದ್ದರ ಬಗ್ಗೆ ನಮಗೆ ಹೆಮ್ಮೆಯಿದೆ. ಏಕೆಂದರೆ ಆರ್‌ಎಸ್‌ಎಸ್ ರಾಷ್ಟ್ರೀಯತೆಯ ಸಂಕೇತ ಎಂದವರು ಹೇಳಿದರು.
ಸಿದ್ದರಾಮಯ್ಯ ಚಡ್ಡಿ ಸುಡುವುದಲ್ಲ ಬದಲಾಗಿ ರಾಷ್ಟ್ರ ಪ್ರೇಮಿಗಳ ಭಾವನೆಗಳನ್ನು ಸುಡುತ್ತಿದ್ದಾರೆ. ಆರ್‌ಎಸ್‌ಎಸ್ ಚಡ್ಡಿ ರಾಷ್ಟ್ರ ಪ್ರೇಮದ ಮತ್ತು ಸೇವಾ ಮನೋಭಾವದ ಸಂಕೇತ. ಇದನ್ನು ಸುಡುವ ಮನಸ್ಥಿತಿ ವಿಕೃತ ಮನಸ್ಸಿನ ಪರಾಕಾಷ್ಠತೆ ಎಂದರು.
ಬೋಳ ಗ್ರಾಮದಲ್ಲಿ ನಾಥುರಾಮ್ ಗೋಡ್ಸೆ ನಾಮಫಲಕವನ್ನು ಹಾಕಿದ್ದರ ವಿಚಾರವಾಗಿ ಮಾತನಾಡಿದ ಅವರು ಕಾನೂನು ಬಾಹಿರವಾಗಿ ಹಾಕಿದ ಇಂತಹ ಫಲಕಗಳನ್ನು ತೆಗೆಯುವ ಅಧಿಕಾರವಿರುವ ಗ್ರಾಪಂ. ಗಳು ಫಲಕವನ್ನು ತೆಗಿಸಿದೆ. ಪ್ರಕರಣ ತನಿಖೆಯಾಗುತ್ತಿದೆ ಎಂದು ತಿಳಿಸಿದರು.