ಮಂಗಳೂರು; ಕೊಲೆ ಆರೋಪಿಗಳ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ: ಗುಂಡಿನ ದಾಳಿ
ಮೂವರು ಪೊಲೀಸರು ಸೇರಿ ಐದು ಮಂದಿಗೆ ಗಾಯ

ಮಂಗಳೂರು : ಕೊಲೆ ಪ್ರಕರಣವೊಂದರ ಆರೋಪಿಗಳ ಬಂಧನಕ್ಕೆ ತೆರಳಿದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ ಘಟನೆ ಮುಲ್ಕಿಯಲ್ಲಿ ನಡೆದಿದ್ದು, ಈ ಸಂದರ್ಭ ರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸಹಿತ 5 ಮಂದಿ ಗಾಯಗೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ಡೇವಿಡ್, ಪಿಎಸ್ಐ ನಾಗೇಂದ್ರ, ಹೆಚ್ಸಿ ಸುಧೀರ್ ಪೂಜಾರಿ, ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ, ಮನೋಜ್ ಯಾನೆ ಬಿಂದಾಸ್ ಮನೋಜ್ ಗಾಯಗೊಂಡವರು ಎಂದು ತಿಳಿದುಬಂದಿದೆ.
ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ನಗರ ಅಪರಾಧ ಪತ್ತೆದಳದ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ ನೇತೃತ್ವದ ತಂಡ ಬಲೆ ಬೀಸಿತ್ತು.
ಆರೋಪಿಗಳು ಮುಲ್ಕಿ ಸಮೀಪವಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಗೆ ಯತ್ನಿಸಿದ್ದರು. ಇದರಿಂದ ಪೊಲೀಸ್ ಸಿಬ್ಬಂದಿಗಳಾದ ಡೇವಿಡ್, ಸುನೀಲ್, ನಾಗೇಂದ್ರ ಅವರಿಗೆ ಗಾಯವಾಗಿದೆ. ಕೂಡಲೇ ಪ್ರಕರಣದ ಗಂಭೀರತೆ ಅರಿತ ಪೊಲೀಸ್ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಆರೋಪಿಗಳಾದ ಅರ್ಜುನ್ ಮತ್ತು ಮನೋಜ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಗಳು ಅಲ್ಲೇ ಕುಸಿದು ಬಿದ್ದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಯಗೊಂಡ ಮೂವರು ಪೊಲೀಸರು ಮತ್ತು ಇಬ್ಬರು ಆರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮನೋಜ್ - ಅರ್ಜುನ್