ಶಿರ್ವ: 300 ವರ್ಷಗಳಷ್ಟು ಪುರಾತನ ವಸ್ತುಗಳ ಹಸ್ತಾಂತರ

ಉಡುಪಿ: 76 ಬಡಗುಬೆಟ್ಟು ಮೂಡುಮನೆ ಕುಟುಂಬಕ್ಕೆ ಸೇರಿದ ಸುಮಾರು 300 ವರ್ಷಗಳಿಗೂ ಅಧಿಕ ಪುರಾತನ ವಾದ ಹಲವು ಪ್ರಾಚೀನ ಲೋಹದ ವಸ್ತುಗಳನ್ನು ಶನಿವಾರ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಪದವಿ ಕಾಲೇಜಿನ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಯಿತು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನ, ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ರಾಚೀನ ವಸ್ತುಗಳ ಹಸ್ತಾಂತರ ಕಾಯಕ್ರಮವು ಇಂದು ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಭಾರತೀಯ ಸಂಸ್ಕೃತಿಯ ವಿಶ್ವದ ಅತ್ಯಂತ ಪುರಾತನ ಮತ್ತು ಭವ್ಯ ಸಂಸ್ಕೃತಿಯಾಗಿದ್ದು, ಕ್ರಿಸ್ತಪೂರ್ವದಲ್ಲಿಯೇ ನಮ್ಮ ಸಂಸ್ಕೃತಿ ಉದಯವಾಗಿತ್ತು, ಇಂದಿಗೂ ಹಳೆಯ ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಹಲವು ಪುರಾತನ ವಸ್ತುಗಳು ದೊರೆಯುತ್ತಿದ್ದು, ಇವುಗಳು ನಮ್ಮ ಅಂದಿನ ಸಂಸ್ಕೃತಿಯ ವೈಭವವನ್ನು ಸಾರಿ ಹೇಳುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ಮುಖ್ಯಸ್ಥ ಭೀಮಾ ಶಂಕರ್ ಮಾತನಾಡಿ, ಪ್ರಾಚೀನ ವಸ್ತುಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಮ್ಮ ಕುಟುಂಬಕ್ಕೆ ಸೇರಿದ ಹಲವು ಪ್ರಾಚೀನ ವಸ್ತುಗಳನ್ನು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಸಂಗ್ರಹಾಲಯಕ್ಕೆ ಹಸ್ತಾಂತರಿಸಿದ 76 ಬಡಗಬೆಟ್ಟು ಮೂಡುಮನೆ ಕುಟುಂಬದ ರಮಾನಾಥ ಹೆಗ್ಡೆ ಮಾತನಾಡಿ, ನಮ್ಮ ಹಿರಿಯರ ಕಾಲದ ಸುಮಾರು 300ಕ್ಕೂ ಅಧಿಕ ವರ್ಷಗಳ ಪ್ರಾಚೀನ ವಸ್ತುಗಳನ್ನು ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಉಚಿತವಾಗಿ ಕಾಲೇಜಿಗೆ ಹಸ್ತಾಂತರಿ ಸಲಾಗಿದ್ದು, ಇದರ ಸದುಪಯೋಗ ಆಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಹಾಗೂ ಪುರಾತತ್ವ ಸಂಶೋಧಕ ಪ್ರೊ.ಟಿ.ಮುರುಗೇಶಿ, ವಸ್ತು ಸಂಗ್ರಹಾಲಯ ಎಂಬುವುದು ಮುಂದಿನ ಪೀಳಿಗೆಗೆ ಇತಿಹಾಸವನ್ನು ಪರಿಚಯಿಸುವ ಮಾಹಿತಿಗಳ ಕಣಜ. ತುಳು ನಾಡಿನ ಸಂಸ್ಕೃತಿಯು ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು, ಇಲ್ಲಿನ ಅನೇಕ ದೇವಾಲಯಗಳಲ್ಲಿರುವ ಪ್ರಾಚೀನ ವಸ್ತುಗಳು ಜೀರ್ಣೋದ್ದಾರದ ಹೆಸರಿನಲ್ಲಿ ನೀರಿನಲ್ಲಿ ವಿಸರ್ಜನೆಯಾಗುತ್ತಿವೆ. ಇವುಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದರು.
ದೇವಾಲಯಗಳ ಪ್ರಾಚೀನ ಪರಿಕರಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಿ, ಆ ವಸ್ತುಗಳನ್ನು ಸಂಗ್ರಹಾಲಯಗಳಿಗೆ ನೀಡುವುದರ ಮೂಲಕ ಅವುಗಳ ಸಂರಕ್ಷಣೆ ಮಾಡಿ,ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಮೂಲಕ ಚಾರಿತ್ರಿಕ ವೈಶಿಷ್ಟಗಳಾಗಿ ಉಳಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಪ್ರಾಂಶುಪಾಲೆ ಡಾ.ನಯನ ಎಂ ಪಕ್ಕಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಬಿ.ಶಿವಕುಮಾರ್, ಬ್ಯಾಂಕ್ ಆಫ್ ಬರೋಡಾದ ಶಿರ್ವ ಶಾಖೆಯ ಮೆನೇಜರ್ ಎಡ್ರಿಕ್ ಅಜಯ್ ಡಿಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ವಿಶಾಲ್ ರೈ ಸ್ವಾಗತಿಸಿದರೆ, ದಿಶಾಂತ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಅಪೂರ್ವವಾದ ಪ್ರಾಚೀನ ದೇವತಾ ಮೂರ್ತಿಗಳು, ಪೂಜೆಗೆ ಬಳಸುವ ದೀಪ ಮತ್ತಿತರ ಪರಿಕರಗಳನ್ನು ಹಸ್ತಾಂತರಿಸಲಾಯಿತು.