ಮಂಗಳೂರು; ನಕಲಿ ವೈದ್ಯಕೀಯ ಪ್ರಮಾಣ ಪತ್ರ ಜಾಲ ಭೇದಿಸಿದ ಸಿಬಿಐ : ಓರ್ವ ವೈದ್ಯ ಸಹಿತ ಮೂವರು ಸೆರೆ

ಮಂಗಳೂರು: ಮಂಗಳೂರು ಕೇಂದ್ರವಾಗಿಟ್ಟು ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದು, ದಾಳಿ ನಡೆಸಿ ಒಬ್ಬರು ವೈದ್ಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ರೈಲ್ವೇ ನೌಕರರು ತಮ್ಮ ದೈಹಿಕ ಕ್ಷಮತೆ ಬಗ್ಗೆ ಪ್ರತಿ ವರ್ಷ ಇಲಾಖೆಗೆ ಪ್ರಮಾಣ ಪತ್ರ ಸಲ್ಲಿಸಬೇಕು. ದೈಹಿಕವಾಗಿ ಸ್ವಸ್ಥರಿದ್ದೇವೆ ಎನ್ನುವುದನ್ನು ಮುಂದಿನ ವರ್ಷದ ಕರ್ತವ್ಯಕ್ಕೆ ಹೊರಡುವ ಮುನ್ನ ದೃಢಪಡಿಸಬೇಕು. ಅನಾರೋಗ್ಯ, ರೋಗಬಾಧೆ ಇರುವ ಬಗ್ಗೆ ವೈದ್ಯರು ದಢೀಕರಿಸಿದಲ್ಲಿ ನಿಗದಿತ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಇರುವುದಿಲ್ಲ. ಆದರೆ, ಈ ರೀತಿಯ ಕಡ್ಡಾಯ ನೀತಿ ಇರುವುದರಿಂದಲೇ ರೈಲ್ವೇ ನೌಕರರು ವೈದ್ಯರ ತಪಾಸಣೆಗೆ ಹಾಜರಾಗದೆ ದಲ್ಲಾಳಿಗಳ ಮೂಲಕ ಪ್ರಮಾಣಪತ್ರ ಪಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಿರುವ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಮೇಲೆ ದಾಳಿ ನಡೆಸಿದ್ದು ವೈದ್ಯಕೀಯ ಅಧೀಕ್ಷಕ ಸೇರಿ ಮೂವರನ್ನು ಬಂಧಿಸಿದ್ದಾರೆ.
ಹಲವು ಸಮಯಗಳಿಂದ ಇಲ್ಲಿ ದಂಧೆ ನಡೆಯುತ್ತಿದ್ದ ಬಗ್ಗೆ ಮಾಹಿತಿಗಳಿದ್ದು, ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಮತ್ತು ಕೊಂಕಣ ರೈಲ್ವೇಯಲ್ಲಿ ಉದ್ಯೋಗದಲ್ಲಿರುವ ಸಿಬಂದಿ ಇಲ್ಲಿನ ಆರೋಗ್ಯ ಕೇಂದ್ರದಿಂದಲೇ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದರು.
ಸಿಬಿಐ ಅಧಿಕಾರಿಗಳು ಇದುವರೆಗೆ 1500ಕ್ಕೂ ಹೆಚ್ಚು ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಮಂಗಳೂರಿನ ಕೇಂದ್ರದಿಂದ ನೀಡಿರುವುದನ್ನು ಪತ್ತೆ ಮಾಡಿದ್ದಾರೆ. ಆರೋಗ್ಯ ಕೇಂದ್ರದ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಿವಶಂಕರ ಮೂರ್ತಿ, ಔಷಧಾಲಯದ ಅಧಿಕಾರಿ ವಿಜಯನ್ ವಿ.ಎ. ಮತ್ತು ಇವರಿಗೆ ದಲ್ಲಾಳಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ಇಬ್ರಾಹಿಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ದಾಳಿ ಮಾಡಿ, ಮೂವರನ್ನು ವಶಕ್ಕೆ ಪಡೆದಿರುವ ಬಗ್ಗೆ ಸಿಬಿಐ ಅಧಿಕಾರಿಗಳು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.







