ಬೈಕ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ, 9 ಬೈಕ್ ವಶ

ಕುಂದಾಪುರ : ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ 12 ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಬೈಕ್ ಕಳವು ಆರೋಪಿಗಳನ್ನು ಬಂಧಿಸಿರುವ ಕೋಟ ಪೊಲೀಸರು, 9 ಬೈಕ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಅತ್ತಿಗುಡ್ಡೆಯ ಸೋಮಶೇಖರ (21) ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಹೊಸಮನೆಯ ಶಂಕರ ಗೌಡ(23) ಬಂಧಿತ ಆರೋಪಿಗಳು.
ಜೂ.9ರಂದು ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಜೊತೆ ನಿಂತಿದ್ದ ಆರೋಪಿ ಗಳಿಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಗಳು ಕಳೆದ ಮೂರು ವರ್ಷಗಳಿಂದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದು, ಉಡುಪಿ ನಗರ ಠಾಣೆಯಲ್ಲಿ ಏಳು, ಬ್ರಹ್ಮಾವರ ಠಾಣೆಯ ಒಂದು, ಶಂಕರಾನಾರಾಯಣ ಠಾಣೆಯ ಒಂದು, ಶೃಂಗೇರಿ ಠಾಣೆಯ ಒಂದು, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ ಒಂದು ಮತ್ತು ದಾವಣಗೆರೆ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಇವುಗಳಲ್ಲಿ ಮೂರು ಪಲ್ಸರ್ ಬೈಕ್, ಐದು ಸ್ಪೆಂಡರ್ ಬೈಕ್ ಮತ್ತು ಒಂದು ಹೀರೋ ಡಿಲಕ್ಸ್ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ೪.೫ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
