ನಕಲಿ ದಾಖಲೆ ಸೃಷ್ಟಿ ಆರೋಪ: ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ಪ್ರಜೆಗಳು ಸೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.11: ನಕಲಿ ದಾಖಲೆ ಸೃಷ್ಟಿ, ಎಟಿಎಂ ಕೇಂದ್ರದಲ್ಲಿ ಹಣ ಕಳವು ಆರೋಪ ಸಂಬಂಧ ಹಲವು ಬಾಂಗ್ಲಾದೇಶ ಪ್ರಜೆಗಳನ್ನು ಇಲ್ಲಿನ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಸೈದುಲ್ ಅಖೂನ್, ಎಂ.ಅಬ್ದುಲ್ ಸಲೀಂ, ಸುಹೈಲ್ ಅಹ್ಮದ್, ಮುಹಮ್ಮದ್ ಹಿದಾಯತ್, ಸೈಯದ್ ಮನ್ಸೂರ್, ಅಮೀನ್ ಸೇಠ್, ಆಯಿಷಾ, ರಾಕೇಶ್, ಇಸ್ತಿಯಾಕ್ ಪಾಷಾ ಬಂಧಿತರಾಗಿದ್ದು, ಈ ಪೈಕಿ ರಾಕೇಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಇಸ್ತಿಯಾಕ್ ಮೆಡಿಕಲ್ ಒಂದರಲ್ಲಿ ಉದ್ಯೋಗಿ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?: ಎ.15ರಂದು ಬೆಳಗ್ಗಿನ ಜಾವ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಗೊಲ್ಲರಹಟ್ಟಿ ಗ್ರಾಮದ ಎಸ್ಬಿಐ ಎಟಿಎಂ ಮಿಷನ್ ಕಳವು ಮಾಡಿ 18 ಲಕ್ಷ ದೋಚಿದ್ದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾಗ ಬಾಂಗ್ಲಾ ದೇಶದ ಪ್ರಜೆಗಳು ಭಾಗಿಯಾಗಿರುವ ಮಾಹಿತಿ ಹೊರಬಿದ್ದಿದೆ.
ಪ್ರಕರಣ ಸಂಬಂಧ ಬಾಂಗ್ಲಾ ದೇಶದ ಪ್ರಜೆ ಶೇಕ್ ಇಸ್ಲಾಯಿಲ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬಾಂಗ್ಲಾದೇಶದಿಂದ ಭಾರತಕ್ಕೆ ತ್ರಿಪುರ ಗಡಿ ಮುಖಾಂತರ ಅಕ್ರಮವಾಗಿ ನುಸುಳಿ ಬಂದಿರುವುದಾಗಿ ತಿಳಿಸಿದ್ದಾನೆ. ಆನಂತರ, ನಕಲಿ ದಾಖಲೆ ಸೃಷ್ಟಿಸಿ ನಗರ ವ್ಯಾಪ್ತಿಯಲ್ಲಿ ಸ್ಥಳೀಯ ವಿಳಾಸದ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಕೊಂಡು ಪ್ಲ್ಯಾಸ್ಟಿಕ್ ಮತ್ತು ಇತರೆ ಸ್ಕ್ರಾಪ್ ಸಂಗ್ರಹಣೆ ಮಾಡಿ ಎನ್ಎ ಪ್ಲ್ಯಾಸ್ಟಿಕ್ ಎಂಬ ಹೆಸರಿನಲ್ಲಿ ಕಂಪೆನಿಯನ್ನು ನಡೆಸುತ್ತಿರುವ ಸೈದುಲ್ ಅಖೂನ್ ತನ್ನ ಬ್ಯಾಂಕ್ ಖಾತೆಗಳಿಂದ ಏಜೆಂಟ್ ಮುಖಾಂತರ ಬಾಂಗ್ಲಾದೇಶಕ್ಕೆ ಭಾರತದ ರೂಪಾಯಿಯನ್ನು ಸ್ಥಳೀಯ ಟಾಕಾ ಕರೆನ್ಸಿಯಾಗಿ ಪರಿವರ್ತಿಸಿ ವರ್ಗಾವಣೆ ಮಾಡುತ್ತಿದ್ದಾರೆಂದು ಬಾಯ್ಬಿಟ್ಟಿದ್ದಾನೆ.
ಈತನ ಮಾಹಿತಿ ಮೇರೆಗೆ ಬಾಂಗ್ಲಾದೇಶದ ಪ್ರಜೆ ಸೈದುಲ್ ಅಖೂನ್ ಮತ್ತು ಆತನ ಮಗ ಸುಮನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ದಾಖಲೆ ಸೃಷ್ಟಿ ಪತ್ತೆಯಾಗಿದೆ.
ಆನಂತರ, ಅಬ್ದುಲ್ ಅಲೀಂ ಎಂಬಾತನನ್ನು ಬಂಧಿಸಿ ಆತನ ಮುಖಾಂತರ ನಕಲಿ ಲೆಟರ್ಹೆಡ್ಗಳನ್ನು ತಯಾರಿಸಿಕೊಡುತ್ತಿದ್ದ ಹಾಗೂ ಬಿಬಿಎಂಪಿ ವೈದ್ಯಾಧಿಕಾರಿಗಳ ಸೀಲ್ ಇಟ್ಟುಕೊಂಡು 500ರಿಂದ 1000 ರೂ.ಗಳಿಗೆ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಸ್ಥಳೀಯ ನಿವಾಸಿಗಳಾದ ಸಾಫ್ಟ್ವೇರ್ ಇಂಜಿನಿಯರ್ ಬಿಬಿಎಂಪಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡುವ ಫಾರ್ಮಸಿಸ್ಟ್, ಮಧ್ಯವರ್ತಿ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.
ಇವರಿಂದ ಬೌರಿಂಗ್, ವಾಣಿವಿಲಾಸ ಸೇರಿದಂತೆ ನಗರದ ವಿವಿಧ ಬಿಬಿಎಂಪಿಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ 5 ಸೀಲ್, 26 ನಕಲಿ ಲೆಟರ್ಹೆಡ್, ಸೀಲ್ ತಯಾರು ಮಾಡುವ ಯಂತ್ರ, 16 ಮೊಬೈಲ್, 3 ಸಿಪಿಯು, 2 ಲ್ಯಾಪ್ಟಾಪ್, 2 ಪ್ರಿಂಟರ್, 31 ಆಧಾರ್ ಕಾರ್ಡ್ಗಳು, 13 ಪಾನ್ಕಾರ್ಡ್ಗಳು, 28 ಮತದಾರರ ಚೀಟಿಗಳು, 4 ಈ-ಶ್ರಮ್ ಕಾರ್ಡ್ಗಳು ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ಸಿಬ್ಬಂದಿಗೆ ಬಹುಮಾನ
ಮಾದನಾಯಕನಹಳ್ಳಿ ಠಾಣಾ ಪೊಲೀಸರ ಕಾರ್ಯಾಚರಣೆಗೆ ಐಜಿಪಿ ಚಂದ್ರಶೇಖರ್ ಪ್ರಶಂಸಿಸಿದ್ದು 75 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಬಂಧಿತರ ವಿರುದ್ಧ ಕ್ರಮ : ಅಕ್ರಮ ವಲಸಿಗರು ಹಾಗೂ ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುತ್ತಿದ್ದವರ ವಿರುದ್ಧ ತೀವ್ರ ನಿಗಾ ವಹಿಸಬೇಕು. ಅಕ್ರಮ ಚಟುವಟಿಕೆಗಳ ಮೇಳೆ ನಿಯಂತ್ರಣ ಹೇರಬೇಕು ಎಂದು ನಿರ್ದೇಶಿಸಿದ್ದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪ್ರಕರಣ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, ಅಕ್ರಮ ವಲಸೆ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲು ಎಂದರು.







