ಮಂಕಿಪಾಕ್ಸ್ ಪ್ರಕರಣ ಪತ್ತೆಮಾಡುವುದು ಕಷ್ಟ: ಅಮೆರಿಕ

ವಾಷಿಂಗ್ಟನ್, ಜೂ.11: ಈಗ ಪತ್ತೆಯಾಗಿರುವ ಮಂಕಿಪಾಕ್ಸ್ ಪ್ರಕರಣಗಳು ಸಾಮಾನ್ಯ ರೋಗಲಕ್ಷಣವನ್ನು ಹೆಚ್ಚಾಗಿ ಹೊಂದಿಲ್ಲದಿರುವುದರಿಂದ ರೋಗವನ್ನು ನಿರ್ಣಯಿಸಲು ಹೆಚ್ಚು ಕಷ್ಟಕರವಾಗುತ್ತದೆ ಎಂದು ಅಮೆರಿಕದ ಆರೋಗ್ಯ ತಜ್ಞರು ಶುಕ್ರವಾರ ಹೇಳಿದ್ದಾರೆ.
ರೋಗದ ಹರಡುವಿಕೆಯನ್ನು ತಡೆಯಲು ಪ್ರಕರಣಗಳನ್ನು ಗುರುತಿಸುವುದು ನಿರ್ಣಾಯಕವಾಗಿದೆ ಎಂದು ‘ದಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್(ಸಿಡಿಸಿ) ಒತ್ತಿಹೇಳಿದೆ. ಈಗ ವರದಿಯಾಗುತ್ತಿರುವ ಮಂಕಿಪಾಕ್ಸ್ ಪ್ರಕರಣಗಳು ಸೌಮ್ಯ ಲಕ್ಷಣ ಹೊಂದಿದ್ದು ಕೆಲವೊಮ್ಮೆ ದೇಹದ ಸೀಮಿತ ಭಾಗಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ. ಇವು ಪಶ್ಚಿಮ ಮಧ್ಯ ಆಫ್ರಿಕಾದ ಸ್ಥಳೀಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಿನ್ನವಾಗಿದೆ . ಇದರಿಂದಾಗಿ ಕೆಲವು ಪ್ರಕರಣಗಳು ಗುರುತಿಸಲಾಗದೆ ಅಥವಾ ರೋಗಲಕ್ಷಣ ಮಾಡಲಾಗದೆ ಉಳಿದುಹೋಗಬಹುದು. ಆದ್ದರಿಂದ ವೈದ್ಯಕೀಯ ಕ್ಷೇತ್ರದ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ ಎಂದು ಸಿಡಿಸಿ ಮುಖ್ಯಸ್ಥೆ ರಚೆಲ್ ವಲೆಂಸ್ಕಿ ಹೇಳಿದ್ದಾರೆ.
ಪ್ರಸ್ತುತ ಪತ್ತೆಯಾಗಿರುವ ಪ್ರಕರಣಗಳು ಫ್ಲೂ ರೀತಿಯ ಲಕ್ಷಣ(ಜ್ವರ, ಮೈಕೈ ನೋವು), ಊದಿಕೊಂಡ ಗ್ರಂಥಿಗಳು ಇತ್ಯಾದಿಯನ್ನು ಹೊಂದಿಲ್ಲ. ಸಾಮಾನ್ಯವಾಗಿ ಮಂಕಿಪಾಕ್ಸ್ ಸಾಂಕ್ರಾಮಿಕದಲ್ಲಿ ದೇಹದ ಮೇಲೆಲ್ಲಾ ಗುಳ್ಳೆಗಳು ಕಾಣಿಸಿಕೊಂಡರೆ ಈಗ ಕಂಡುಬಂದಿರುವ ಕಾಯಿಲೆಯಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬಂದಿದೆ. ಅಮೆರಿಕದಲ್ಲಿ ಈಗ ಮಂಕಿಪಾಕ್ಸ್ ಪ್ರಕರಣ 45ಕ್ಕೆ ಏರಿಕೆಯಾಗಿದೆ ಎಂದವರು ಹೇಳಿದ್ದಾರೆ.