ಬಿರುಸು ಪಡೆದ ಮುಂಗಾರು ಮಳೆ: ಮಂಗಳೂರಿಗೆ ಎನ್‌ಡಿಆರ್‌ಎಫ್ ತಂಡ ಆಗಮನ

ಮಂಗಳೂರು: ಕರಾವಳಿಯಾದ್ಯಂತ ಮುಂಗಾರು ಮಳೆ ಬಿರುಸು ಪಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ನಗರಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಶನಿವಾರ ಉತ್ತಮ ಮಳೆಯಾಗಿದೆ.
ಮನಪಾ ಸೇರಿದಂತೆ ದ.ಕ. ಜಿಲ್ಲಾಡಳಿತ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿರುವಂತೆ ಇದೀಗ ಎನ್‌ಡಿಆರ್‌ಎಫ್ ತಂಡವೂ ನಗರಕ್ಕೆ ಆಗಮಿಸಿದೆ.
ನಗರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮೋಡ ಕವಿದ ವಾತಾವರಣವಿತ್ತು. ಜತೆಗೆ ಆಗಾಗ್ಗೆ ಜಡಿಮಳೆ ಸುರಿಯಿತು. ಮಳೆಯ ಕಾರಣ ನಗರದ ಕೆಲವೆಡೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಕೆಸರು ಮಿಶ್ರಿತ ಮಳೆ ನೀರು ಹರಿದು ಜನತೆ ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಮುಂದಿನ 48 ಗಂಟೆ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಮಂಗಳೂರಿಗೆ ಆಗಮಿಸಿರುವ ಎನ್‌ಡಿಆರ್‌ಎಫ್ ತಂಡದಲ್ಲಿ ಮೂವರು ಅಧಿಕಾರಿಗಳು ಮತ್ತು 17 ಮಂದಿ ಜವಾನರು ಇದ್ದಾರೆ. ಪಣಂಬೂರಿನ ಸಿಐಎಸ್ಎಫ್ ವಸತಿ ಗೃಹದಲ್ಲಿ ತಂಡಕ್ಕೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.





