ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ: ಟ್ರಂಪ್ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ

ವಾಷಿಂಗ್ಟನ್, ಜೂ.11: ಜಾರ್ಜಿಯಾ ರಾಜ್ಯದಲ್ಲಿ 2020ರಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಬುಡಮೇಲುಗೊಳಿಸಲು ಪ್ರಯತ್ನಿಸಿದ ಆರೋಪವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ನ್ಯೂಸ್‌ವೀಕ್ ವರದಿ ಮಾಡಿದೆ.
ಟ್ರಂಪ್ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಫುಲ್ಟನ್ ಪ್ರಾಂತದ ಅಟಾರ್ನಿ ಫಾನಿ ವಿಲ್ಲಿಸ್ ಈ ತಿಂಗಳೊಳಗೆ ನಿರ್ಧರಿಸಲಿದ್ದಾರೆ ಎಂದು ವರದಿ ಹೇಳಿದೆ. ಈ ವರ್ಷದ ಪ್ರಥಮಾರ್ಧದೊಳಗೆ ಖಂಡಿತವಾಗಿಯೂ ಈ ಕುರಿತ ನಿರ್ಧಾರ ಕೈಗೊಳ್ಳುವುದಾಗಿ ವಿಲ್ಲಿಸ್ ಹೇಳಿದ್ದಾರೆ. ನಿರ್ಣಾಯಕವಾದ ಜಾರ್ಜಿಯಾ ರಾಜ್ಯದ ಚುನಾವಣೆಯಲ್ಲಿ ಟ್ರಂಪ್ ಅಲ್ಪಅಂತರದಿಂದ ಸೋಲುಂಡಿದ್ದರು. ಆದರೆ ಫಲಿತಾಂಶವನ್ನು ಒಪ್ಪಿಕೊಳ್ಳದೆ ಅದರಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ. ಈ ಆರೋಪದ ವಿಚಾರಣೆ ನಡೆಸುತ್ತಿರುವ ವಿಲ್ಲಿಸ್ ಸುಮಾರು 400ಕ್ಕೂ ಅಧಿಕ ಜನರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರಾಜ್ಯದ ಕಾರ್ಯದರ್ಶಿ ಬ್ರಾಡ್ ರಫೆನ್‌ಸ್ಪರ್ಜರ್ ಸಹಿತ ಹಲವು ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಕಳೆದ ವರ್ಷ ಕ್ಯಾಪಿಟಲ್ ಹಿಲ್ಸ್‌ನಲ್ಲಿ ನಡೆದ ದಂಗೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯ ವರದಿಯಲ್ಲಿ, ತನ್ನಿಂದ ಗೆಲುವನ್ನು ಕಸಿದುಕೊಳ್ಳಲಾಗಿದೆ ಎಂದು ಬೆಂಬಲಿಗರನ್ನುದ್ದೇಶಿಸಿ ಟ್ರಂಪ್ ನೀಡಿದ ಹೇಳಿಕೆ ಅಧಿಕಾರದಲ್ಲಿ ಉಳಿಯುವ ಸಲುವಾಗಿ ನಡೆಸಿದ ದಂಗೆಯ ಪ್ರಯತ್ನವಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೋ ಬೈಡನ್ ವಿಜಯಿಯಾದ 2020ರ ಚುನಾವಣೆಯ ಫಲಿತಾಂಶ ಬುಡಮೇಲುಗೊಳಿಸಲು ಟ್ರಂಪ್ ಅವರ ಪ್ರೇರಣೆಯಿಂದ ಬಹು ಆಳದ ಸಂಚನ್ನು ಹೂಡಲಾಗಿತ್ತು ಎಂದು ವರದಿ ಹೇಳಿದೆ.
ಆದರೆ ಸಮಿತಿಯ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಟ್ರಂಪ್, ಇದೊಂದು ಆಧಾರರಹಿತ ವಾಮಾಚಾರದ ಉಪಕ್ರಮವಾಗಿದೆ ಎಂದಿದ್ದಾರೆ. ‘ಕ್ಯಾಪಿಟಲ್ ಹಿಲ್ಸ್ ಬಂಡಾಯವು ನಮ್ಮ ದೇಶದ ಇತಿಹಾಸದಲ್ಲಿ ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಟವಾಗಿಸುವ ಮಹಾನ್ ಚಳವಳಿಯಾಗಿದೆ’ ಎಂದು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರತಿಪಾದಿಸಿದ್ದಾರೆ.