ವಿಶ್ವಸಂಸ್ಥೆ ಆರ್ಥಿಕ, ಸಾಮಾಜಿಕ ಸಮಿತಿಗೆ 17 ದೇಶಗಳ ಆಯ್ಕೆ

UN, United Nations
ವಿಶ್ವಸಂಸ್ಥೆ, ಜೂ.11: ವಿಶ್ವಸಂಸ್ಥೆಯ ಏಜೆನ್ಸಿ ಮತ್ತು ನಿಧಿಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿ(ಇಸಿಒಎಸ್ಒಸಿ)ಯ ಸದಸ್ಯರಾಗಿ 3 ವರ್ಷದ ಅವಧಿಗೆ 17 ದೇಶಗಳು ಆಯ್ಕೆಯಾಗಿವೆ.
ಶುಕ್ರವಾರ ನಡೆದ ಗುಪ್ತ ಮತದಾನದಲ್ಲಿ ಈ ಆಯ್ಕೆ ನಡೆಸಲಾಗಿದ್ದು ಮೂರನೇ ಎರಡರಷ್ಟು ಮತಗಳನ್ನು ಪಡೆದ ದೇಶಗಳು ಸದಸ್ಯರಾಗಿ ಆಯ್ಕೆಗೊಂಡಿವೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಆಫ್ರಿಕಾ ದೇಶಗಳಿಂದ ಬೋಟ್ಸ್ವಾನ, ಕೇಪ್ ವೆರ್ಡೆ, ಕ್ಯಾಮರೂನ್, ಇಕ್ವಟೋರಿಯಲ್ ಗಿನಿಯಾ; ಏಶಿಯಾ-ಪೆಸಿಫಿಕ್ ದೇಶಗಳಿಂದ ಚೀನಾ, ಲಾವೊಸ್, ಖತರ್, ದಕ್ಷಿಣ ಕೊರಿಯಾ; ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ದೇಶಗಳಿಂದ ಬ್ರೆಝಿಲ್, ಕೊಲಂಬಿಯಾ, ಕೋಸ್ಟರಿಕಾ; ಪಶ್ಚಿಮ ಯುರೋಪ್ ಮತ್ತು ಇತರ ದೇಶಗಳಿಂದ ಡೆನ್ಮಾರ್ಕ್, ಗ್ರೀಸ್, ನ್ಯೂಝಿಲ್ಯಾಂಡ್, ಸ್ವೀಡನ್; ಪೂರ್ವ ಯುರೋಪಿಯನ್ ದೇಶಗಳಿಂದ ಸ್ಲೊವೇನಿಯಾ ಮತ್ತು ಸ್ಲೊವಾಕಿಯಾ ದೇಶಗಳು ಸದಸ್ಯರಾಗಿ ಆಯ್ಕೆಗೊಂಡಿವೆ. 2023ರ ಜನವರಿ 1ರಿಂದ ಮುಂದಿನ 3 ವರ್ಷ ಸದಸ್ಯತ್ವ ಜಾರಿಯಲ್ಲಿರುತ್ತದೆ. ಇದರಲ್ಲಿ ಬೋಟ್ಸ್ವಾನ, ಚೀನಾ, ಕೊಲಂಬಿಯಾ, ಡೆನ್ಮಾರ್ಕ್, ಗ್ರೀಸ್, ನ್ಯೂಝಿಲ್ಯಾಂಡ್ ಮತ್ತು ದಕ್ಷಿಣ ಕೊರಿಯಾ ಮರು ಆಯ್ಕೆಗೊಂಡಿವೆ.
ಪಶ್ಚಿಮ ಯುರೋಪ್ ಮತ್ತು ಇತರ ದೇಶಗಳಿಂದ ಆವರ್ತ(ರೊಟೇಷನ್) ಸದಸ್ಯತ್ವಕ್ಕೆ ನಡೆದ ಉಪಚುನಾವಣೆಯಲ್ಲಿ ಲೀಚ್ಟೆನ್ಸ್ಟೀನ್ ದೇಶ ಆಯ್ಕೆಗೊಂಡಿದೆ. ಪೂರ್ವ ಯುರೋಪಿಯನ್ ದೇಶಗಳ ವಿಭಾಗದಲ್ಲಿ ಇನ್ನೂ ಒಂದು ಸ್ಥಾನ ಭರ್ತಿಯಾಗಬೇಕಿದ್ದು ರಶ್ಯ ಮತ್ತು ನಾರ್ಥ್ ಮೆಸಡೋನಿಯಾ ದೇಶಗಳ ಮಧ್ಯೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಹಲವು ಹಂತಗಳ ಚುನಾವಣೆ ಬಳಿಕವೂ ಅಗತ್ಯವಿರುವ ಮೂರನೇ ಎರಡು ಮತ ಪಡೆಯಲು ಎರಡೂ ದೇಶಗಳು ವಿಫಲವಾಗಿರುವುದರಿಂದ ಮುಂದಿನ ದಿನದಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಇಸಿಒಎಸ್ಒಸಿಯಲ್ಲಿ 54 ಸದಸ್ಯರಿದ್ದಾರೆ.