ಬೊಲಿವಿಯಾ ಮಾಜಿ ಅಧ್ಯಕ್ಷೆಗೆ ಜೈಲುಶಿಕ್ಷೆ

Reuters
ಸುಕ್ರೆ, ಜೂ.11: ರಾಜಕೀಯ ಅಸ್ಥಿರತೆಯ ಲಾಭ ಪಡೆದು ದಂಗೆಯ ಮೂಲಕ ಅಧಿಕಾರಕ್ಕೆ ಬಂದ ಆರೋಪ ಸಾಬೀತಾಗಿರುವುದರಿಂದ ಬೊಲಿವಿಯಾದ ಮಾಜಿ ಅಧ್ಯಕ್ಷೆ ಜೆನ್ನಿ ಆ್ಯನೆರ್ಗೆ 10 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಅಲ್ಲಿನ ನ್ಯಾಯಾಲಯ ಘೋಷಿಸಿದೆ.
54 ವರ್ಷದ ಆ್ಯನೆರ್ ಸಂವಿಧಾನಕ್ಕೆ ವಿರುದ್ಧವಾದ ನಿರ್ಧಾರ ಕೈಗೊಂಡಿದ್ದರು ಮತ್ತು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ, ಆಗ ಬಲಪಂಥೀಯ ಒಕ್ಕೂಟದ ಸಂಸದೆಯಾಗಿದ್ದ ಆ್ಯನೆರ್ ಸಂವಿಧಾನವನ್ನು ಉಲ್ಲಂಘಿಸಿ ದಂಗೆ ಎದ್ದಿದ್ದರು ಎಂದು ಆರೋಪಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಶಸ್ತ್ರ ದಳಗಳ ಮಾಜಿ ಕಮಾಂಡರ್ ವಿಲಿಯಮ್ಸ್ ಕಲಿಮನ್, ಪೊಲೀಸ್ ಇಲಾಖೆಯ ಮಾಜಿ ಮುಖ್ಯಸ್ಥ ವ್ಲಾದಿಮಿರ್ ಕಾಲ್ಡರನ್ಗೂ 10 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. ಇತರ ನಾಲ್ವರು ಸೇನಾಧಿಕಾರಿಗಳಿಗೆ ಕಡಿಮೆ ಶಿಕ್ಷೆ ಘೋಷಿಸಲಾಗಿದೆ.
ತೀರ್ಪನ್ನು ಪ್ರಶ್ನಿಸಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಆ್ಯನೆರ್ ಪರ ವಕೀಲರು ಹೇಳಿದ್ದಾರೆ.