ದಾರಿತಪ್ಪಿಸುವ ಜಾಹೀರಾತು ತಡೆಗೆ ಕ್ರಮ: ಕೇಂದ್ರ ಸರಕಾರದಿಂದ ನೂತನ ಮಾರ್ಗಸೂಚಿ

ಹೊಸದಿಲ್ಲಿ, ಜೂ. 11: ಮಕ್ಕಳನ್ನು ಗುರಿಯಾಗಿರಿಸುವ ಹಾಗೂ ಗ್ರಾಹಕರನ್ನು ಸೆಳೆಯಲು ಮನೆ ಬಂದಂತೆ ಪ್ರಚಾರ ಮಾಡುವ ಜಾಹೀರಾತು ಸೇರಿದಂತೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ತಡೆಯಲು ನೂತನ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಶುಕ್ರವಾರ ಜಾರಿಗೆ ತಂದಿದೆ.
ಜಾಹೀರಾತುಗಳನ್ನು ಪ್ರಾಯೋಜಿಸುವಾಗ ಪ್ರಾಮಾಣಿಕತೆ ಅನುಸರಿಸುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಅಧಿಸೂಚಿಸಿದ ನೂತನ ಮಾರ್ಗಸೂಚಿಗಳು ಕೂಡಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಅಲ್ಲದೆ, ಬಾಡಿಗೆ ಜಾಹೀರಾತುಗಳನ್ನು ನಿಷೇಧಿಸಲಿದೆ ಹಾಗೂ ಜಾಹೀರಾತಿನಲ್ಲಿ ಹಕ್ಕು ನಿರಾಕರಣೆಯಲ್ಲಿ ಪಾರದರ್ಶಕತೆ ತರಲಿದೆ. ಮಾರ್ಗಸೂಚಿಗಳನ್ನು ಪ್ರಕಟಿಸಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ‘‘ಜಾಹೀರಾತುಗಳು ಗ್ರಾಹಕರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿವೆ.
ಗ್ರಾಹಕರ ಹಕ್ಕುಗಳ ಮೇಲೆ ದುಷ್ಪರಿಣಾಮ ಉಂಟು ಮಾಡುವ ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳನ್ನು ನಿರ್ವಹಿಸಲು ಸಿಸಿಪಿಎ ಕಾಯ್ದೆ ಅಡಿಯಲ್ಲಿ ನಿಯಮಗಳು ಇವೆ’’ ಎಂದು ಹೇಳಿದ್ದಾರೆ. ‘‘ಆದರೆ, ಅದನ್ನು ಹೆಚ್ಚು ಸ್ಪಷ್ಟ, ಪಾರದರ್ಶಕಗೊಳಿಸಲು ಹಾಗೂ ಕೈಗಾರಿಕೆಗಳಿಗೆ ಅರಿವು ಮೂಡಿಸಲು ಇಂದಿನಿಂದ ಅನ್ವಯವಾಗುವಂತೆ ನ್ಯಾಯೋಚಿತ ಜಾಹೀರಾತುಗಳಿಗೆ ಮಾರ್ಗಸೂಚಿಗಳನ್ನು ಸರಕಾರ ಜಾರಿಗೊಳಿಸಿದೆ’’ ಎಂದು ಅವರು ಹೇಳಿದ್ದಾರೆ. ಮುದ್ರಣ, ಟೆಲಿವಿಷನ್ ಹಾಗೂ ಆನ್‌ಲೈನ್‌ನಂತಹ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ನೂತನ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕೇಂದ್ರ ಗ್ರಾಹಕರ ರಕ್ಷಣೆ ಕಾಯ್ದೆ (ಸಿಸಿಪಿಎ)ಯಂತೆ ಕ್ರಮ ಕೈಗೊಳ್ಳಲಾಗುವುದು. ಈ ಮಾರ್ಗಸೂಚಿಗಳು ರಾತ್ರೋರಾತ್ರಿ ಬದಲಾವಣೆಯನ್ನು ತರಲಾರದು ಎಂದು ಪ್ರತಿಪಾದಿಸಿದ ಅವರು, ಪ್ರಮಾದದಿಂದಲೂ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ತಡೆಯಲು ಇದು ಕೈಗಾರಿಕೆ ಪಾಲುದಾರರಿಗೆ ಅವಕಾಶ ನೀಡಲಿದೆ. ಅಲ್ಲದೆ, ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ದೂರು ದಾಖಲಿಸಲು ಗ್ರಾಹಕರು ಹಾಗೂ ಗ್ರಾಹಕರ ಸಂಘಟನೆಗಳನ್ನು ಸಶಕ್ತಗೊಳಿಸಲಿದೆ ಎಂದಿದ್ದಾರೆ.
ಈ ಮಾರ್ಗಸೂಚಿಗಳು ಸರಕಾರ ಜಾಹೀರಾತುಗಳಿಗೆ ಕೂಡ ಅನ್ವಯವಾಗಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಭಾರತದ ಜಾಹೀರಾತು ಗುಣಮಟ್ಟ ಮಂಡಳಿ ಜಾರಿಗೊಳಿಸಿದ ಸ್ವ-ನಿಯಂತ್ರಣಕ್ಕೆ ಜಾಹೀರಾತು ಮಾರ್ಗಸೂಚಿಗಳು ಕೂಡ ಪರ್ಯಾಯವಾಗಿ ಇರಲಿವೆ ಎಂದು ಅವರು ತಿಳಿಸಿದ್ದಾರೆ.