ಎಫ್ಐಎಚ್ ಪ್ರೊ ಲೀಗ್; ಒಲಿಂಪಿಕ್ ಚಾಂಪಿಯನ್ನರಿಗೆ ಆಘಾತ ನೀಡಿದ ಭಾರತ ಹಾಕಿ ತಂಡ

(ಫೋಟೊ - Twitter/Hockey India)
ಅಂಟ್ವೆರ್ಪ್: ಪೆನಾಲ್ಟಿ ಸ್ಟ್ರೋಕ್ ಅದ್ಭುತ ಹೊಡೆತವನ್ನು ಅಮೋಘವಾಗಿ ತಡೆದ ಭಾರತದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್, ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಭಾರತದ ಪುರುಷರ ಹಾಕಿ ತಂಡ ಸೋಲಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು.
ಪ್ರೊ ಹಾಕಿ ಲೀಗ್ನ ಎರಡು ಲೆಗ್ಗಳ ಪ್ರಥಮ ಪಂದ್ಯದಲ್ಲಿ ಶನಿವಾರ ಭಾರತ ತಂಡ 5-4 ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಸೋಲಿಸಿತು.
ಪಂದ್ಯದ ಅವಧಿ ಮುಗಿಯಲು ಕೇವಲ 8 ನಿಮಿಷ ಇದ್ದಾಗ 1-3 ಹಿನ್ನಡೆಯಲ್ಲಿದ್ದ ಭಾರತ ಅದ್ಭುತ ಪ್ರದರ್ಶನ ನೀಡಿ 3-3 ಸಮಬಲ ಮಾಡಿಕೊಂಡು ಪೆನಾಲ್ಟಿ ಶೂಟೌಟ್ಗೆ ತಂದು ನಿಲ್ಲಿಸಿತು.
ಶ್ರೀಜೇಶ್ ಅವರು ನಿಕೋಲಸ್ ಡೇ ಕೆರ್ಪಲ್ ಅವರ ಶೂಟೌಟ್ ಅನ್ನು ವಿಫಲಗೊಳಿಸಿ 4-4 ಸಮಬಲ ಸಾಧಿಸಿದಾಗ ಆಕಾಶದೀಪ್ ಸಿಂಗ್ ಅವರು ಚೆಂಡನ್ನು ನೆಟ್ ಸೇರಿಸಿ ಟೋಕಿಯೊ ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತ ತಂಡದ ವಿರುದ್ಧ 5-4 ಗೆಲುವಿಗೆ ಕಾರಣರಾದರು.
ಮಾಮೂಲಿನಂತೆ ಗೋಲು ಪೆಟ್ಟಿಗೆ ಎದುರು ಅದ್ಭುತ ಕೌಶಲ ಪ್ರದರ್ಶಿಸಿದ ಶ್ರೀಜೇಶ್ ಪಂದ್ಯದುದ್ದಕ್ಕೂ ಅತಿಥೇಯರನ್ನು ಕಾಡಿದರು. ಅದರಲ್ಲೂ ಅಂತಿಮ ಕ್ವಾರ್ಟರ್ ನಲ್ಲಿ ಎರಡು ಗೋಲುಗಳನ್ನು ತಡೆದದ್ದು ಪ್ರಮುಖ ಎನಿಸಿತು.
ಮೊದಲ ಕ್ವಾರ್ಟರ್ ನಲ್ಲೇ ಎರಡು ಗೋಲುಗಳನ್ನು ಶ್ರೀಜೇಶ್ ತಡೆದ ಕಾರಣ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮೊದಲು ಗೋಲು ಗಳಿಸುವ ಅವಕಾಶವನ್ನು ಭಾರತ ತಂಡ ಪಡೆಯಿತು. ಆದರೆ ಅತಿಥೇಯ ತಂಡದ ಅದ್ಭುತ ರಕ್ಷಣಾತ್ಮಕ ಆಟದಿಂದಾಗಿ ಭಾರತ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಶಂಶೀರ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ಇದಾದ ಸ್ವಲ್ಪ ಸಮಯದಲ್ಲೇ ಸೆಡ್ರಿಕ್ ಚಾರ್ಲಿಯರ್ ಅವರು ನಿಕೋಲಸ್ ಕೆರ್ಪಲ್ ಅವರ ಪಾಸ್ ಅನ್ನು ಮಿಂಚಿನಂತೆ ಗೋಲುಪೆಟ್ಟಿಗೆಗೆ ಸೇರಿಸಿ ಸಮಬಲ ಸಾಧಿಸಿದರು.
ಮೂರನೇ ಕ್ವಾರ್ಟರ್ ನಲ್ಲಿ ಸೈಮನ್ ಗೌಗ್ನಾರ್ಡ್ ಹಾಗೂ ಡೆ ಕೆರ್ಪೆಲ್ ಅವರ ಗೋಲುಗಳು ಬೆಲ್ಜಿಯಂಗೆ 3-1 ಗೋಲುಗಳ ಮುನ್ನಡೆ ದೊರಕಿಸಿದವು.







