ಆನೆ ದಾಳಿಯಿಂದ ಮಹಿಳೆ ಮೃತ್ಯು; ಅಂತ್ಯಸಂಸ್ಕಾರಕ್ಕೂ ದಾಳಿ ಮಾಡಿದ ಸಲಗ!

ಸಾಂದರ್ಭಿಕ ಚಿತ್ರ
ಬರಿಪಾಡ, ಒಡಿಶಾ: ಆನೆ ದಾಳಿಯಿಂದ 70 ವರ್ಷದ ಮಹಿಳೆ ಮೃತಪಟ್ಟಿದ್ದು ಮಾತ್ರವಲ್ಲದೇ, ಮಹಿಳೆಯ ಅಂತ್ಯಸಂಸ್ಕಾರದ ವೇಳೆ ಮತ್ತೆ ಸಲಗ ದಾಳಿ ನಡೆಸಿ ದೇಹವನ್ನು ಎಳೆದಾಡಿದ ಘಟನೆ ಒಡಿಶಾದ ಮಯೂರಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಮಾಯಾ ಮುರ್ಮು ಎಂಬ ಮಹಿಳೆ ಗುರುವಾರ ಬೆಳಗ್ಗೆ ರಾಯಿಪಾಲ್ ಜಿಲ್ಲೆಯಲ್ಲಿ ಕೊಳವೆಬಾವಿಯಿಂದ ನೀರು ತರುತ್ತಿದ್ದ ವೇಳೆ, ದಲ್ಮಾ ವನ್ಯಧಾಮದಿಂದ ತಪ್ಪಿಸಿಕೊಂಡ ಕಾಡಾನೆಯೊಂದು ದಾಳಿ ನಡೆಸಿತ್ತು.
ಆನೆ ತುಳಿತಕ್ಕೆ ಒಳಗಾದ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗಳಿಂದಾಗಿ ಮಹಿಳೆ ಮೃತಪಟ್ಟರು ಎಂದು ರಸಗೋವಿಂದಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲೋಪಮುದ್ರಾ ನಾಯಕ್ ಹೇಳಿದ್ದಾರೆ.
ಸಂಜೆ ಕುಟುಂಬದವರು ಮಾಯಾ ಮುರ್ಮು ಅವರ ಅಂತ್ಯಸಂಸ್ಕಾರ ನಡೆಸುತ್ತಿದ್ದ ವೇಳೆ ಮತ್ತೆ ದಿಢೀರ್ ದಾಳಿ ನಡೆಸಿದ ಒಂಟಿ ಸಲಗ ಚಿತೆಯಿಂದ ಮಹಿಳೆಯ ದೇಹವನ್ನು ಎಳೆದಾಟಿತು. ಶವವನ್ನು ಕೂಡಾ ತುಳಿದು ಹಾಕಿದ ಆನೆ, ದೂರಕ್ಕೆ ಎಸೆದು ಓಡಿಹೋಯಿತು. ಕೆಲ ಗಂಟೆಗಳ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.