ಎಲ್ಲಾ ಕಾನೂನುಗಳ ಮೂಲ ಸಂವಿಧಾನ : ನ್ಯಾ. ಶೋಭಾ ಬಿ.ಜಿ.
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ

ಮಂಗಳೂರು : ಬಾಲ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೂ ಮುಂಚಿತವಾಗಿ ಸಂವಿಧಾನದ 24ನೆ ಪರಿಚ್ಛೇದದಲ್ಲಿಯೇ 14 ವರ್ಷದೊಳಗಿನ ಮಕ್ಕಳು ಯಾವುದೇ ರೀತಿಯ ಕಾರ್ಖಾನೆ, ಗಣಿಗಾರಿಕೆ ಸೇರಿದಂತೆ ಅಪಾಯಕಾರಿ ಸ್ಥಳಗಳಲ್ಲಿ ದುಡಿಯುವುದನ್ನು ನಿರ್ಬಂಧಿಸಿದೆ. ಹಾಗಾಗಿ ಎಲ್ಲಾ ಕಾನೂನುಗಳ ಮೂಲ ಸಂವಿಧಾನವಾಗಿದ್ದು, ಅದನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಿದರೆ ಹಲವು ರೀತಿಯ ಅಪರಾಧಗಳನ್ನು ತಪ್ಪಿಸಬಹುದು ಎಂದು ದ.ಕ. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭ ಬಿ.ಜಿ. ಅಭಿಪ್ರಾಯಿಸಿದ್ದಾರೆ.
ಅವರು ಇಂದು ದ.ಕ.ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮಗೆ ಸಂವಿಧಾನದಲ್ಲಿ ನೀಡಲಾಗಿರುವ ವಾಕ್, ಅಭಿವ್ಯಕ್ತಿ ಸ್ವಾತಂತ್ರಕ್ಕೆ ನಾವು ನೀಡುವ ಮಹತ್ವದ ಜತೆಗೆ ನಮ್ಮ ಕರ್ತವ್ಯಗಳನ್ನೂ ಪಾಲನೆ ಮಾಡಿದರೆ ಬಾಲ ಕಾರ್ಮಿಕ ಸಮಸ್ಯೆಗಳನ್ನು ಅತ್ಯಂತ ಸುಲಭವಾಗಿ ಬಗೆಹರಿಸಬಹುದು. ಬಾಲ ಕಾರ್ಮಿಕ ವ್ಯವಸ್ಥೆ ಸಮಾಜದ ಜತೆಗೆ ದೇಶಕ್ಕೆ ಮಾರಕ. ಇದರಿಂದ ದೇಶಕ್ಕೆ ಉತ್ತಮ ಪ್ರಜೆಗಳ ಕೊರತೆ ಉಂಟಾಗುತ್ತದೆ. ಇಂತಹ ಕಾನೂನು ಅರಿವಿನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಈ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, 18 ವರ್ಷದೊಳಗಿನ ಯಾರೂ ಶಾಲಾ ಕಾಲೇಜುಗಳಿಂದ ವಂಚಿತರಾಗದಿರುವ ಬಗ್ಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಗಮನ ಹರಿಸಿ ತಮ್ಮ ಕರ್ತವ್ಯ ಪಾಲಿಸಿದರೆ ನಮ್ಮ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬಹುದು ಎಂದರು.
ಒಂದು ತಿಂಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂಬುದಾಗಿ ಘೋಷಣೆ ಮಾಡಿದ್ದಲ್ಲಿ ಜನರು ತಪ್ಪನ್ನು ಗುರುತಿಸುವ ದೃಷ್ಟಿಯಿಂದಲಾದರೂ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ ನೀಡಬಹುದು. ಆ ಮೂಲಕವಾದರೂ ನಾವು ಅಂತಹ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ನಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ನಡೆ ಭಾವನಾತ್ಮಕವಾಗಿರುವ ಜತೆಗೆ ನಮ್ಮ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆ- ರಾಜ್ಯಗಳಿಂದ ಆಗಮಿಸುವ ಮಕ್ಕಳ ಪಟ್ಟಿ ಮಾಡಿ ಶಾಲೆಗೆ ಹೋಗುತ್ತಿರುವ ಬಗ್ಗೆ ಗಮನ ಹರಿಸಿದರೆ ಸ್ವಾಭಾವಿಕವಾಗಿಯೇ ಬಾಲ ಕಾರ್ಮಿಕತೆಯಿಂದ ಮಕ್ಕಳನ್ನು ಹೊರತಾಗಿಸಬಹುದು ಎಂದರು.
ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲೂ ಬಾಲ ಕಾರ್ಮಿಕ ವಿರೋಧಿ ಕಾನೂನಿನ ದಂಡನೆಯ ಜತೆಗೆ ತಾವು ಬಾಲ ಕಾರ್ಮಿಕ ಮುಕ್ತ ಸಂಸ್ಥೆ ಎಂಬ ಸ್ವಯಂ ಘೋಷಣೆಯನ್ನು ಹೊಂದಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಖಾತರಿಪಡಿಸಿ ಪರಿಶೀಲನೆಗೊಪಡಿಸಬೇಕು ಎಂದು ಅವರು ಸೂಚಿಸಿದರು.
ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರದ ಹಿಲ್ಡಾ ರಾಯಪ್ಪನ್, ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ಉಪಾಧ್ಯಕ್ಷ ಮನೋರಾಜ್, ನ್ಯಾಯವಾದಿ ನಿಖೇಶ್ ಶೆಟ್ಟಿ ಮೊದಲಾದವವರು ಉಪಸ್ಥಿತರಿದ್ದರು.
ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಈ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಅಧಿಕಾರಿ ಅಮರೇಂದ್ರ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಉರ್ವಾ ಸ್ಟೋರ್‌ನಿಂದ ದ.ಕ. ಜಿಲ್ಲಾ ಪಂಚಾಯತ್ ಕಚೇರಿವರೆಗೆ ಜಾಥಾ ನಡೆಯಿತು.
ಬೆರಗುಗೊಳಿಸಿದ ಕೊಲ್ಕತ್ತಾ ಬಾಲಕಿಯ ಸ್ಫುಟ ಕನ್ನಡ!
ಬೊಂದೇಲ್‌ನಲ್ಲಿರುವ ಚಿಣ್ಣರ ತಂಗುಧಾಮದಲ್ಲಿ ನಾಲ್ಕನೆ ತರಗತಿ ಕಲಿಯುತ್ತಿರುವ ಕೊಲ್ಕತ್ತಾ ಮೂಲದ ಗುಡಿಯಾ ಮೋದಿ ಹೆಸರಿನ ಬಾಲಕಿ ಸ್ಫುಟವಾದ ಕನ್ನಡದಲ್ಲಿ ತನ್ನ ಅನಿಸಿಕೆ ವ್ಯಕ್ತಪಡಿಸುತ್ತಾ ಅಧಿಕಾರಿಗಳು ಮಾತ್ರವಲ್ಲದೆ ಸೇರಿದ್ದ ಸಭಿಕರನ್ನು ಮಂತ್ರಮುಗ್ದಗೊಳಿಸಿದಳು.
‘‘ನನಗೆ ತಂದೆ ಇಲ್ಲ. ಅಮ್ಮ ಮನೆಕೆಲಸಕ್ಕೆ ಹೋಗುತ್ತಿದ್ದರು. ಅಣ್ಣ ಬಾಲ ಮಂದಿರದಲ್ಲಿ ಓದುತ್ತಿದ್ದ. ನನಗೂ ಶಾಲೆಗೆ ಹೋಗಬೇಕೆಂಬ ಆಸೆಯಿತ್ತು. ಅದಕ್ಕಾಗಿ ಅಮ್ಮ ಪ್ರಜ್ಞಾ ಚಿಣ್ಣರ ಧಾಮಕ್ಕೆ ಸೇರಿಸಿದರು. ನನಗೆ ಹಿಂದಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಅಕ್ಷರಾಭ್ಯಾಸ ಇರಲಿಲ್ಲ. ಆದರೆ ಈಗ ನಾಲ್ಕು ವರ್ಷಗಳಲ್ಲಿ ನಾನು ಕಲಿಕೆಯಲ್ಲೂ ಫಸ್ಟ್, ಜತೆಗೆ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೇನೆ. ನಾನು ದೊಡ್ಡವಳಾಗಿ ಶಿಕ್ಷಕಿಯಾಗಿ ಬಡ ಮಕ್ಕಳಿಗೆ ಕಲಿಸಬೇಕೆಂದಿದ್ದೇನೆ. ಬಾಲ್ಯದಿಂದಲೂ ನನಗೆ ಸೈಕಲ್ ಎಂದರೆ ಇಷ್ಟ. ಆದರೆ ಸೈಕಲ್ ಇರಲಿಲ್ಲ. ಚಿಣ್ಣರ ಧಾಮದಲ್ಲಿ ನಮಗೆ ಸೈಕಲ್ ದೊರೆಯಿತು. ಬಿದ್ದು ಬಿದ್ದು ಕಲಿತ ನಾನು ಈಗ ಚಿಣ್ಣರ ಧಾಮದ 23 ಮಕ್ಕಳಲ್ಲಿ ನಾನೇ ಫಾಸ್ಟಾಗಿ ಓಡಿಸುವವಳು’’ ಎನ್ನುತ್ತಾ ಪಟಪಟನೆ ಸ್ಫುಟವಾಗಿ ಕನ್ನಡ ಮಾತನಾಡುತ್ತಾ ಗುಡಿಯಾ ಎಲ್ಲರ ಗಮನ ಸೆಳೆದರು.
ಪಚ್ಚನಾಡಿಯ ಅಶ್ವಿನಿ ಕೂಡಾ ತಾನು ಪ್ರಜ್ಞಾ ಚಿಣ್ಣರ ಧಾಮದಲ್ಲಿ 7ನೆ ತರಗತಿ ಕಲಿಯುತ್ತಿರುವ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಪ್ರಜ್ಞಾ ಚಿಣ್ಣರ ಧಾಮದ ಮಕ್ಕಳಿಗೆ ದೊಡ್ಡಮನಾಗಿಯೇ ಗುರುತಿಸಲ್ಪಡುವ ಡಾ. ಹಿಲ್ಡಾ ರಾಯಪ್ಪನ್ ಬಗ್ಗೆ ಮಕ್ಕಳಿಬ್ಬರು ಹೇಳುವುದನ್ನು ಮರೆಯಲಿಲ್ಲ.