ಅದಾನಿ ಕಂಪೆನಿಗೆ ವಿದ್ಯುತ್ ಯೋಜನೆ ನೀಡಲು ಮೋದಿ ಒತ್ತಾಯಿಸಿದ್ದರೆಂದು ಆರೋಪಿಸಿ ಹೇಳಿಕೆ ಹಿಂಪಡೆದ ಶ್ರೀಲಂಕಾ ಅಧಿಕಾರಿ

ಪ್ರಧಾನಿ ನರೇಂದ್ರ ಮೋದಿ / ಅದಾನಿ / ಗೋತಬಯ ರಾಜಪಕ್ಸೆ (Photo: PTI)
ಕೊಲಂಬೋ: 500 ಮೆಗಾವ್ಯಾಟ್ ಪವನ (ಗಾಳಿಗೋಪುರ) ವಿದ್ಯುತ್ ಯೋಜನೆಯನ್ನು ನೇರವಾಗಿ ಅದಾನಿ ಸಮೂಹಕ್ಕೆ ನೀಡಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ತಮಗೆ ತಿಳಿಸಿರುವುದಾಗಿ ಶ್ರೀಲಂಕಾದ ವಿದ್ಯುತ್ ಪ್ರಾಧಿಕಾರದ ಮುಖ್ಯಸ್ಥರು ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ ಎಂದು thenewsminute ವರದಿ ಮಾಡಿದೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಪಕ್ಸೆ, ಯೋಜನೆಯನ್ನು ಯಾವುದೇ ನಿರ್ದಿಷ್ಟ ಸಂಸ್ಥೆಗೆ ನೀಡುವಂತೆ ಕೇಳಿಕೊಂಡಿರುವುದನ್ನು ನಿರಾಕರಿಸಿದ್ದಾರೆ.
ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ, ಈ ವಾರದ ಆರಂಭದಲ್ಲಿ ಶ್ರೀಲಂಕಾ ಸಂಸತ್ತಿನಲ್ಲಿ ನಡೆದ ಸಾರ್ವಜನಿಕ ಉದ್ಯಮಗಳ ಸಮಿತಿಯ ವಿಚಾರಣೆಯ ಸಂದರ್ಭದಲ್ಲಿ, ಅದಾನಿ ಗ್ರೂಪ್ಗೆ ಇಂಧನ ಯೋಜನೆಗಳನ್ನು ನೀಡಬೇಕೆಂದು ಪ್ರಧಾನಿ ಮೋದಿ ಒತ್ತಾಯಿಸುತ್ತಿದ್ದಾರೆ ಎಂದು ರಾಜಪಕ್ಸೆ ಹೇಳಿದ್ದರು ಎಂದು ಸಾಕ್ಷ್ಯ ನೀಡಿದ್ದರು. ಆದಾಗ್ಯೂ, ಎರಡು ದಿನಗಳ ನಂತರ, ತಮ್ಮ ಹೇಳಿಕೆಯನ್ನು ಹಿಂಪಡೆದ ಫರ್ಡಿನಾಂಡೋ, ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗಿದ್ದೆ, ಮತ್ತು ಸುಳ್ಳು ಹೇಳಿಕೆ ನೀಡಿದ್ದೆ ಎಂದು ತಮ್ಮ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಶ್ರೀಲಂಕಾದ ಸುದ್ದಿ ಸಂಸ್ಥೆ ನ್ಯೂಸ್ ಫಸ್ಟ್ ವರದಿ ಪ್ರಕಾರ, ಫರ್ಡಿನಾಂಡೋ ಅವರು, ಇದು ವಿದ್ಯುತ್ ಪ್ರಾಧಿಕಾರ ಅಥವಾ ತನಗೆ ಸಂಬಂಧಿಸಿದ ವಿಷಯವಲ್ಲ, ಹೂಡಿಕೆ ಮಂಡಳಿಗೆ ಇದನ್ನು ತಿಳಿಸಬೇಕು ಎಂದು ಅಧ್ಯಕ್ಷ ಗೋತಬಯ ಅವರಿಗೆ ತಿಳಿಸಿದ್ದಾರೆ. ಬಳಿಕ, ಸ್ವತಃ ಫರ್ಡಿನಾಂಡೋ ಅವರೇ ಈ ವಿಷಯವನ್ನು ಪರಿಶೀಲಿಸುವಂತೆ ಲಿಖಿತವಾಗಿ ಖಜಾನೆ ಕಾರ್ಯದರ್ಶಿ ಗಮನಕ್ಕೆ ತಂದಿದ್ದಾರೆ. ಇದು ʼಸರ್ಕಾರದಿಂದ ಸರ್ಕಾರದೊಡನೆʼ ನಡೆಯುವ ಒಪ್ಪಂದವಾಗಿದೆ ಎಂದು ಅವರು ತಿಳಿಸಿರುವುದಾಗಿ ನ್ಯೂಸ್ ಫಸ್ಟ್ ವರದಿ ಮಾಡಿದೆ.
“ನವೆಂಬರ್ 24 [2021] ರಂದು, ಸಭೆಯ ನಂತರ ಅಧ್ಯಕ್ಷರು ನನ್ನನ್ನು ಕರೆದರು. ಭಾರತದ ಪ್ರಧಾನಿ ಮೋದಿ ಅವರು ಯೋಜನೆಯನ್ನು ಅದಾನಿ ಗುಂಪಿಗೆ ಹಸ್ತಾಂತರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು. ಈ ವಿಷಯವು ನನಗೆ ಅಥವಾ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ಗೆ ಸಂಬಂಧಿಸಿಲ್ಲ ಮತ್ತು ಇದು ಹೂಡಿಕೆ ಮಂಡಳಿಗೆ ಸಂಬಂಧಿಸಿದೆ ಎಂದು ನಾನು ಹೇಳಿದೆ, ” ಎಂದು ಅವರು ಹೇಳಿರುವುದಾಗಿ ನ್ಯೂಸ್ ಫಸ್ಟ್ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ದಾಖಲಾಗಿದೆ ಎಂದು TheNewsMinute ವರದಿ ಮಾಡಿದೆ.
ಆದಾಗ್ಯೂ, ರಾಜಪಕ್ಸೆ ಅವರು ಫರ್ಡಿನಾಂಡೋ ಹೇಳಿಕೆಯನ್ನು ಅಲ್ಲಗಳೆದಿದ್ದು, ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಗೆ ಈ ಯೋಜನೆಯನ್ನು ನೀಡುವ ಅಧಿಕಾರವನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದರ ಬೆನ್ನಲ್ಲೇ, ಎಂಎಂಸಿ ಫರ್ಡಿನಾಂಡೋ ಶ್ರೀಲಂಕಾದ ಸುದ್ದಿ ವಾಹಿನಿ News1st ಗೆ ನಾನು ಆ ಹೇಳಿಕೆಯನ್ನು ಹಿಂಪಡೆದಿದ್ದೇನೆ ಎಂದು ಹೇಳಿದ್ದಾರೆ.







