ಆಮ್ ಆದ್ಮಿ ಪಕ್ಷದ ಉಡುಪಿ ಜಿಲ್ಲಾ ಕಚೇರಿ ಉದ್ಘಾಟನೆ

ಉಡುಪಿ : ಕಡಿಯಾಳಿ ಮಾಂಡವಿ ಟ್ರೇಡ್‌ಸೆಂಟರ್ ವಾಣಿಜ್ಯ ಸಂಕೀರ್ಣದಲ್ಲಿ ಆರಂಭಿಸಲಾಗಿರುವ ಆಮ್ ಆದ್ಮಿ ಪಕ್ಷ(ಆಪ್)ದ ಜಿಲ್ಲಾ ಕಚೇರಿ ಯನ್ನು ಮಾಂಡವಿ ಬಿಲ್ಡರ್ಸ್‌ನ ಪ್ರವರ್ತಕ ಜೆರ್ರಿ ವಿನ್ಸೆಂಟ್ ಡಯಾಸ್ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಣ ಮಾಡುವ ಉದ್ದೇಶ ಮತ್ತು ಅಧಿಕಾರದ ಆಸೆಗಾಗಿ ರಾಜಕೀಯಕ್ಕೆ ಯಾರು ಕೂಡ ಬರುವುದು ಒಳ್ಳೆಯದಲ್ಲ. ಅದೇ ರೀತಿ ರಾಜಕೀಯ ಪಕ್ಷಗಳು ಜಾತಿ, ಧರ್ಮದ ನೆಲೆಯಲ್ಲಿ ಕಾರ್ಯನಿರ್ವಹಿಸ ಬಾರದು. ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡುವ ಬದ್ಧತೆ ರಾಜ ಕಾರಣಿಗಳಿಗೆ ಇರಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಸನಿಲ್ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಪಕ್ಷವನ್ನು ಭದ್ರಗೊಳಿಸುವ ಕೆಲಸ ಮಾಡಲಾಗುತ್ತದೆ. ಮುಂದಿನ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಆಪ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ವಲಯ ಮುಖ್ಯಸ್ಥ ಜೆ.ಪಿ.ರಾವ್, ಜಿಲ್ಲಾ ಸಂಘಟಕ ಕೆ.ಮಥಾಯ್ ಉಪಸ್ಥಿತರಿದ್ದರು. ಸಂಘಟನಾ ಮುಖ್ಯಸ್ಥ ಡಾಲ್ಫಿ ವಿನ್ಸೆಂಟ್ ಲೂಯಿಸ್ ಸ್ವಾಗತಿಸಿದರು. ಉದಯ ಕಿರಣ್ ಕಾರ್ಯಕ್ರಮ ನಿರೂಪಿಸಿದರು.