ಡಾ. ಎಂ.ಎನ್.ರಾಜೇಂದ್ರ ಕುಮಾರ್‌ಗೆ "ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್"
ಜೂನ್ 15ರಂದು ದುಬೈಯಲ್ಲಿ ಪ್ರಶಸ್ತಿ ಸ್ವೀಕಾರ

ಮಂಗಳೂರು: ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಲಖನೌ ನೀಡುವ ಇಂಟರ್‌ಬನ್ಯಾಶನಲ್ ವರ್ಲ್ಡ್ " ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್" ಗೆ ಸಹಕಾರ ರಂಗದ ಸಾಧಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ( ಎಸ್ ಸಿಡಿಸಿ ಸಿ ಬ್ಯಾಂಕ್ ) ಅಧ್ಯಕ್ಷರಾದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಭಾಜನರಾಗಿದ್ದಾರೆ.
ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗೈದ ಅಪೂರ್ವ ಸಾಧನೆಗೆ ಈ ಪ್ರಶಸ್ತಿ ಬಂದಿದೆ.
ದುಬೈಯ ಭಾಯಿ ಅಜ್ಮಾನ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಜೂನ್ -14 ಮತ್ತು ಜೂನ್ -15ರಂದು ಎರಡು ದಿನಗಳ ಮೈಲ್‌ಸ್ಟೋನ್ ಗ್ಲೋಬಲ್ ಕಾನ್‌ಕ್ಲೇವ್ ಇಂಟರ್ ನ್ಯಾಶನಲ್ ಸೆಮಿನರ್ ನಡೆಯಲಿದೆ. ಜೂನ್ -14ರಂದು ನಡೆಯುವ ಇಂಟರ್ ನ್ಯಾಶನಲ್ ಸೆಮಿನರ್ ನಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು 'ಮಹಿಳಾ ಸಬಲೀಕರಣ' ವಿಷಯದ ಬಗ್ಗೆ ಮಾತನಾಡಲಿರುವರು. ಸ್ವ ಸಹಾಯ ಸಂಘಗಳ ಮೂಲಕ ವಿಶೇಷವಾಗಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಮೂಲಕ ಗೈದ ಯಶೋಗಾಥೆಯ ಕುರಿತು ರಾಜೇಂದ್ರ ಕುಮಾರ್ ತಮ್ಮ ಅಭಿಪ್ರಾಯವನ್ನು ಇಂಟರ್ ನ್ಯಾಶನಲ್ ಸೆಮಿನರ್ ನಲ್ಲಿ ಮಂಡಿಸಲಿರುವರು.
ಜೂನ್ -15ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ ನ್ನು ಸ್ವೀಕರಿಸಲಿರುವರು. ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜೇಂದ್ರ ಕುಮಾರ್ ಅವರಿಗೆ ಇದು ನಾಲ್ಕನೆಯ ಪ್ರಶಸ್ತಿ. ಭಾರತ ಸರಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೊಸದೆಹಲಿ ಇದರ ವತಿಯಿಂದ ಅಟಲ್ ಪಿಂಚಣಿ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ" ಎಪಿವೈ ರಾಷ್ಟ್ರೀಯ ಪ್ರಶಸ್ತಿ", ಹೊಸದೆಹಲಿಯ ಇನ್ ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಸ್ಟಡೀಸ್ ವತಿಯಿಂದ" ಔಟ್ ಸ್ಟ್ಯಾಂಡಿಂಗ್ ಲೀಡರ್ ಶಿಪ್ ಅವಾರ್ಡ್", ಗ್ಲೋಬಲ್ ಲೀಡರ್ಸ್ ಫೌಂಡೇಶನ್ ಹೊಸದಿಲ್ಲಿ ಇದರ ವತಿಯಿಂದ "ಮೋಸ್ಟ್ ಇನ್ನೋವೇಟೀವ್ ಬಿಸಿನೆಸ್ ಅವಾರ್ಡ್" ರಾಜೇಂದ್ರ ಕುಮಾರ್ ಅವರಿಗೆ ಈಗಾಗಲೇ ಸಂದಿದೆ.
ಇದೀಗ ರಾಜೇಂದ್ರ ಕುಮಾರ್ ಆಯ್ಕೆ ಗೊಂಡಿರುವ" ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ " ಜಾಗತಿಕ ಸಾಧಕರ ಗುರುತಿಸುವಿಕೆಯ ಪ್ರಶಸ್ತಿ ಆಗಿದೆ.ಪ್ರಪಂಚದಾದ್ಯಂತ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕಾರ್ಪೊರೇಟ್ ವಲಯ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ನೆಟ್‌ವರ್ಕಿಂಗ್ ನಿಂದ ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿಕೊಂಡಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಎಸ್ ಸಿಡಿಸಿಸಿ ಬ್ಯಾಂಕ್ ನ್ನು ಬೆಳೆಸಿದ ಹೆಗ್ಗಳಿಕೆ ರಾಜೇಂದ್ರ ಕುಮಾರ್ ಅವರದ್ದು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ ಸೇವೆಯನ್ನು ಕಳೆದ 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಗೈಯುತ್ತಿರುವ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್ ನ್ನು 'ಜನಸ್ನೇಹಿ' ಬ್ಯಾಂಕನ್ನಾಗಿ ರೂಪಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ಇವರು ತಂದುಕೊಟ್ಟಿದ್ದಾರೆ.
ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದು. ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು.







