ಹಕ್ಕುಗಳಿಗಾಗಿ ಕ್ರೈಸ್ತರಿಂದ ಸಂಘಟಿತ ಹೋರಾಟ ಅಗತ್ಯ: ವಾಲ್ಟರ್
ಕಥೊಲಿಕ್ ಸಭಾ ಉಡುಪಿ ಪ್ರದೇಶದ ದಶಮಾನೋತ್ಸವ ವರ್ಷಕ್ಕೆ ಚಾಲನೆ
ಉಡುಪಿ: ಕ್ರೈಸ್ತ ಸಮುದಾಯ ತನ್ನ ಸಂಕುಚಿತ ಮನೋಭಾವದಿಂದ ಹೊರಬಂದು ತಮ್ಮ ಹಕ್ಕುಗಳಿಗಾಗಿ ಸಂಘಟಿತವಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದ್ದು ಇದರೊಂದಿಗೆ ಸೂಕ್ತ ರಾಜಕೀಯ ನಾಯಕತ್ವದ ಅಗತ್ಯತೆ ಕೂಡ ಇದೆ ಎಂದು ದಾಯ್ಜಿ ವಲ್ಡ್ ಮೀಡಿಯಾ ನೆಟ್ ವರ್ಕ್ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಹೇಳಿದ್ದಾರೆ.
ಉಡುಪಿಯ ಶೋಕ ಮಾತಾ ಇಗರ್ಜಿಯ ಸಭಾಂಗಣದಲ್ಲಿ ರವಿವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ದಶಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಇದಕ್ಕೂ ಮುನ್ನ ಕಥೊಲಿಕ್ ಸಭಾದ ಕೇಂದ್ರಿಯ ಸಮಿತಿಯ ೨೦೨೧-೨೨ ನೇ ಸಾಲಿನ ವಾರ್ಷಿಕ ಸಭೆ ಅಧ್ಯಕ್ಷೆ ಮೇರಿ ಡಿಸೋಜ ನೇತೃತ್ವದಲ್ಲಿ ನಡೆಯಿತು. ಕಾರ್ಯದರ್ಶಿ ಗ್ರೆಗರಿ ಪಿ.ಕೆ.ಡಿಸೋಜ ೨೦೨೧-೨೨ರ ಸಾಲಿನ ವಾರ್ಷಿಕ ವರದಿ, ಸಹಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ ೨೦೨೦-೨೧ರ ವಾರ್ಷಿಕ ವರದಿ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಮಾನಸ ಸಂಸ್ಥೆಯ ವರದಿಯನ್ನು ಅಧ್ಯಕ್ಷ ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ವರದಿಯನ್ನು ಕಾರ್ಯದರ್ಶಿ ಆಲಿಸ್ ರೊಡ್ರಿಗಸ್ ವಾಚಿಸಿದರು. ಕಾರ್ಯಕ್ರಮದಲ್ಲಿ ದಶಮಾನೋತ್ಸವ ವರ್ಷದ ಕಾರ್ಯಚಟು ವಟಿಕೆಗಳ ಮುನ್ನೋಟವನ್ನು ಸಂಚಾಲಕ ಆಲ್ವಿನ್ ಕ್ವಾಡ್ರಸ್ ಮತ್ತು ಮಾನಸ ವಿಶೇಷ ಮಕ್ಕಳ ಶಾಲೆಯ ರಜತಮಹೋತ್ಸವ ವರ್ಷದ ಕಾರ್ಯಕ್ರಮಗಳ ವಿವರವನ್ನು ಸಂಚಾಲಕ ಎಲ್.ರೋಯ್ ಕಿರಣ್ ಕ್ರಾಸ್ತಾ ನೀಡಿದರು.
ಕಥೊಲಿಕ್ ಸಭಾ ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ಬರೆದ ಭಾರತದ ಸ್ವಾತಂತ್ರ್ಯದ ಚಳವಳಿಗೆ ಕ್ರೈಸ್ತರ ಕೊಡುಗೆ ಕುರಿತ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ರೋಬರ್ಟ್ ಮಿನೇಜಸ್, ಉಪಾಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಐದು ವಲಯಗಳ ಅಧ್ಯಕ್ಷರು ಹಾಗೂ ೨೦೨೨-೨೩ ನೇ ಸಾಲಿನ ನೂತನ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ, ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗರಿ ಪಿ.ಕೆ. ಡಿಸೋಜಾ ವಂದಿಸಿದರು. ಕ್ಯಾರಲ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು.