''ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿಸಿ ನ್ಯಾಯಲಯಕ್ಕೆ ಅಫಿಡವಿಟ್ ಸಲ್ಲಿಸಿದ ಸರಕಾರ''
ಕಲ್ಕುಳಿ ವಿಠಲ್ ಹೆಗ್ಡೆ ಆರೋಪ

ಕಲ್ಕುಳಿ ವಿಠಲ್ ಹೆಗ್ಡೆ
ಚಿಕ್ಕಮಗಳೂರು, ಜೂ.12: 'ಜಿಲ್ಲಾದ್ಯಂತ ಸಾರ್ವಜನಿಕರ ಉದ್ದೇಶಗಳಿಗಾಗಿ ಮೀಸಲಿರಿಸಿದ್ದ 52,900 ಹೆಕ್ಟೇರ್ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಎಂದು ಘೋಷಿಸಿರುವ ರಾಜ್ಯ ಸರಕಾರ ಮೇ 5ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕದ್ದುಮುಚ್ಚಿ ಅಫಿಡವಿಟ್ ಸಲ್ಲಿಸಿದೆ. ಸರಕಾರದ ಈ ಜನವಿರೋಧಿ ನಿಲುವಿನ ವಿರುದ್ಧ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗುವ ಮೂಲಕ ಬಡಜನರಿಗೆ ದ್ರೋಹ ಬಗೆದಿದ್ದಾರೆ' ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ಹೆಗ್ಡೆ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರ ಬಳಿ ಈ ವಿಚಾರ ಸಂಬಂಧ ಮಾಹಿತಿ ಹಂಚಿಕೊಂಡ ಅವರು, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಜನಪರ ಆಡಳಿತ ನೀಡುವ ಬದಲು ಜನವಿರೋಧಿ ಆಡಳಿತ ನೀಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೀಮ್ಡ್ ಅರಣ್ಯ ಭೂಮಿಯ ಸಮಸ್ಯೆ ಇದೆ. ಸರಕಾರದ ಕಂದಾಯ ಮಂತ್ರಿ ಆರ್.ಅಶೋಕ್ ಅವರು ಇತ್ತೀಚೆಗೆ, ಡೀಮ್ಡ್ ಅರಣ್ಯ ಪೈಕಿ ಕಂದಾಯ ಇಲಾಖೆಗೆ ಒಂದಷ್ಟು ಭೂಮಿಯನ್ನು ಕಂದಾಯ ಇಲಾಖೆಗೆ ಹಿಂಪಡೆಯಲು ಸರಕಾರ ಮುಂದಾಗಿದೆ ಎಂದು ಹೇಳಿದ್ದರು. ಆದರೆ ರಾಜ್ಯ ಸರಕಾರ ಕಂದಾಯ ಅರಣ್ಯ ಭೂಮಿಗಳ ಗಡಿ ಗುರುತು ಮಾಡುವ ಸಂಬಂಧ ಜಂಟಿ ಸರ್ವೇಯನ್ನು ಕೈಗೊಳ್ಳುವ ಮುನ್ನವೇ ರಾಜ್ಯಾದ್ಯಂತ 30 ಜಿಲ್ಲೆಗಳಿಗೆ ಸಂಬಂಧಿಸಿದಂತೆ 330186 ಹೆಕ್ಟೇರ್ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯ ಎಂದು ಘೋಷಿಸಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ 52,900.11 ಹೆ. ಕಂದಾಯ ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಘೋಷಿಸಿ ನ್ಯಾಯಾಲಯಕ್ಕೆ ಸರಕಾರ ಅಫಿಡವಿಟ್ ಸಲ್ಲಿಸಿದ್ದು, ಜಿಲ್ಲಾದ್ಯಂತ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಲಿದ್ದ ಕಂದಾಯ ಭೂಮಿಯನ್ನೇ ಡೀಮ್ಡ್ ಅರಣ್ಯಕ್ಕೆ ಸೇರಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಕಂದಾಯ, ಅರಣ್ಯ ಭೂಮಿ ಸಮಸ್ಯೆ ಜ್ವಲಂತ ಸಮಸ್ಯೆಯಾಗಿದ್ದು, ಜಂಟಿ ಸರ್ವೆ ಮೂಲಕ ಕಂದಾಯ, ಅರಣ್ಯ ಭೂಮಿಗಳ ಗಡಿ ಗುರುತು ಮಾಡುವಂತೆ ಕಳೆದ 2 ದಶಕಗಳಿಂದ ಹೋರಾಟಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ಜಂಟಿ ಸರ್ವೆಯ ಭರವಸೆ ನೀಡುತ್ತಿದೆಯಾದರೂ ಸರ್ವೆಗೆ ಮುಂದಾಗಿಲ್ಲ. ಜಂಟಿ ಸರ್ವೆ ನಡೆಸದೇ ಕಂದಾಯ ಇಲಾಖೆಯ ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಘೋಷಿಸಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವುದು ರಾಜ್ಯ ಸರಕಾರದ ಜನವಿರೋಧಿ ನಿಲುವಾಗಿದೆ ಎಂದರು.
ಜಿಲ್ಲಾದ್ಯಂತ ಸರಕಾರಿ ಜಾಗದಲ್ಲಿ ಕೃಷಿ ಮಾಡಿರುವ ಸಣ್ಣ ಅತಿ ಸಣ್ಣ ರೈತರು ಜಮೀನುಗಳ ಸಕ್ರಮಕ್ಕೆ ಫಾರಂ. ನಂ.50, 53, 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಲೇವಾರಿಗೂ ಮುನ್ನ ಸರಕಾರ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿಸಿರುವುದು ಜನರಿಗೆ ಮಾಡಿದ ದ್ರೋಹವಾಗಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಜಾನ ಕುರುಡುತನ ಪ್ರದರ್ಶಿಸುವ ಮೂಲಕ ಜನರಿಗೆ ವಂಚನೆ ಮಾಡಿದ್ದಾರೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಅವರು, ಇತ್ತೀಚೆಗೆ ಒತ್ತುವರಿ ಸರಕಾರಿ ಭೂಮಿಯನ್ನು ಒತ್ತುವರಿದಾರರಿಗೆ ಲೀಸ್ಗೆ ನೀಡುವುದಾಗಿ ಭರವಸೆ ನೀಡಿ ಹೋಗಿದ್ದಾರೆ. ಈ ಮಧ್ಯೆ ಇರುವ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿಸಿದ್ದಾರೆ. ಜಂಟಿ ಸರ್ವೆ ಮೂಲಕ ಕಂದಾಯ ಭೂಮಿ, ಅರಣ್ಯ ಭೂಮಿ ಯಾವುದೆಂದು ಗುರುತು ಮಾಡದೇ ಒತ್ತುವರಿದಾರರಿಗೆ ಲೀಸ್ಗೆ ಭೂಮಿ ನೀಡಲು ಹೇಗೆ ಸಾಧ್ಯ ಎಂದರು.







