ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ: ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್

ಬೆಂಗಳೂರು, ಜೂ. 12: ದಶಕದ ಹಿಂದೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ನಡೆದಿದ್ದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಸ್ಫೋಟಕ ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿರುವ ಆರೋಪಿಗೆ ಜಾಮೀನು ನೀಡಲು ಎನ್ ಐಎ ವಿಶೇಷ ಕೋರ್ಟ್ ನಿರಾಕರಿಸಿದೆ.
69ನೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ಹಾಗೂ ರಾಷ್ಟ್ರೀಯ ತನಿಖಾ ದಳದ ಪ್ರಕರಣಗಳ ವಿಶೇಷ ನ್ಯಾಯಾಲಯ, ತಮಿಳುನಾಡಿನ ತಿರುನಲ್ವೇಲಿಯ ಪದುಕುಡಿಯ ಡೇನಿಯಲ್ ಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಆರೋಪಿಯು ತನ್ನ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿರುವ ತಮಿಳುನಾಡಿನ ಕಾಯಂ ನಿವಾಸಿ ಎಂಬುದನ್ನು ಪರಿಗಣಿಸಿ ಡೇನಿಯಲ್ ಪ್ರಕಾಶ್ ಜಾಮೀನು ಅರ್ಜಿ ವಜಾಗೊಳಿಸಿತು.
ಪ್ರಾಸಿಕ್ಯೂಷನ್ ಪರ ವಾದಿಸಿದ ವಕೀಲರು, ಆರೋಪಿಯನ್ನು ಬಿಡುಗಡೆ ಮಾಡಿದರೆ ಸಾಕ್ಷಿಗಳನ್ನು ಬೆದರಿಸುವ, ಪರಾರಿಯಾಗುವ ಸಾಧ್ಯತೆ ಇದೆ. ಆರೋಪಿಯ ವಿರುದ್ಧ ಸ್ಫೋಟಕ ಪೂರೈಸಿಸಿರುವ ಇಂತಹದ್ದೇ ಪ್ರಕರಣವೊಂದು ತಮಿಳುನಾಡಿನ ಕೋರ್ಟ್ ನಲ್ಲಿ ಬಾಕಿ ಇದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತು.
21ನೆ ಆರೋಪಿಯಾದ ಡೇನಿಯಲ್ ಪ್ರಕಾಶ್ ಸ್ಫೋಟಕಗಳನ್ನು ಪೂರೈಸಿದ ಆರೋಪವಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್‍ಗಳಾದ 307, 332, 333, 435, ಶಸ್ತ್ರಾಸ್ತ್ರ ಕಾಯಿದೆ 1908ರ ಸೆಕ್ಷನ್‍ಗಳಾದ 3 ಮತ್ತು 5, ಸಾರ್ವಜನಿಕ ಆಸ್ತಿಗೆ ಹಾನಿ ಕಾಯಿದೆ ಸೆಕ್ಷನ್ 4ಅಡಿ ಆರೋಪ ನಿಗದಿ ಮಾಡಲಾಗಿದೆ.







