ಗುಜರಾತಿನಲ್ಲಿ ಕೋಮು ಘರ್ಷಣೆ: ಪೊಲೀಸ್, ಇತರ ಮೂವರಿಗೆ ಗಾಯ
ಆನಂದ, ಜೂ.12: ಗುಜರಾತಿನ ಆನಂದ ಜಿಲ್ಲೆಯ ಬೋರ್ಸಾದ್ ಪಟ್ಟಣದಲ್ಲಿ ಶನಿವಾರ ರಾತ್ರಿ ವಿವಾದಿತ ನಿವೇಶನವೊಂದರಲ್ಲಿ ಇಟ್ಟಿಗೆಗಳನ್ನು ಇರಿಸುವ ಕುರಿತು ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದು, ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ 9:30ರ ಸುಮಾರಿಗೆ ವಿವಾದಿತ ನಿವೇಶನದಲ್ಲಿ ಒಂದು ಸಮುದಾಯಕ್ಕೆ ಸೇರಿದ ಕೆಲವರು ಇಟ್ಟಿಗೆಗಳನ್ನು ಇಡುತ್ತಿದ್ದರು. ಇದನ್ನು ಇನ್ನೊಂದು ಸಮುದಾಯದ ಕೆಲವರು ಆಕ್ಷೇಪಿಸಿದಾಗ ಅವರ ನಡುವೆ ವಾಗ್ವಾದ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿದಾಗ ಎರಡೂ ಗುಂಪುಗಳು ಪರಸ್ಪರರತ್ತ ಕಲ್ಲು ತೂರಾಟ ನಡೆಸಿದ್ದರು. ಸ್ಥಳೀಯ ಪೌರ ಸಂಸ್ಥೆಯ ಮುಖ್ಯಸ್ಥ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಶಾಂತಿಯನ್ನು ಕಾಯ್ದುಕೊಳ್ಳುವಂತೆ ಕೋರಿಕೊಂಡಿದ್ದರು. ಆದರೆ ಓರ್ವ ಪೊಲೀಸ್ ಕಾನಸ್ಟೇಬಲ್ ಮತ್ತು ಓರ್ವ ನಾಗರಿಕನಿಗೆ ಚೂರಿಯಿಂದ ಇರಿಯಲಾಗಿದ್ದು, ಗಂಭೀರ ಗಾಯಗಳಾಗಿವೆ. ಇತರ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಡಿಎಸ್‌ಪಿ ಡಿ.ಆರ್.ಪಟೇಲ್ ತಿಳಿಸಿದರು.
ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ಅಜಿತ ರಜಿಯಾನ್ ತಿಳಿಸಿದರು.





