ಕಬಿನಿ ಭೋಗೇಶ್ವರ ಆನೆ ನಿಧನ: ಪ್ರಾಣಿಪ್ರಿಯರಿಂದ ಸಂತಾಪ

ಮೈಸೂರು,ಜೂ.12: ನೀಳ ದಂತ, ಸುಂದರ ನಡಿಗೆಯ ಮೂಲಕ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ಕೊಡುತ್ತಿದ್ದ 'ಭೋಗೇಶ್ವರ' ಆನೆ ಮೃತಪಟ್ಟಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಕಳೆಬರ ಪತ್ತೆಯಾಗಿದೆ. ಕಬಿನಿ ಶಕ್ತಿಮಾನ್ ಎಂದೇ 'ಭೋಗೇಶ್ವರ' ಖ್ಯಾತಿಗಳಿಸಿದ್ದ.
ಅಂದಾಜು 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣನಿಗೆ ಸುಮಾರು 4 ಅಡಿಗೂ ಉದ್ದದ ಸುಂದರವಾದ ನೀಳ ದಂತವಿತ್ತು. ವಯೋಸಹಜವಾಗಿ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಭೋಗೇಶ್ವರನಿಗೆ ಕಂಬನಿ: ಸಾಮಾಜಿಕ ಜಾಲತಾಣದಲ್ಲಿ ಶಕ್ತಿಮಾನ್ ಪ್ರಸಿದ್ಧವಾಗಿತ್ತು ಮತ್ತು ಆನೆ ನೋಡಲು ಪ್ರವಾಸಿಗರು ಕಬಿನಿಗೆ ಆಗಮಿಸುತ್ತಿದ್ದರು. ಆದರೆ, ಒಂಟಿ ಸಲಗನ ಸಾವಿನಿಂದ ಪ್ರಾಣಿಪ್ರಾಣಿಯರಿಗೆ ಆಘಾತವಾಗಿದೆ. ಕಬಿನಿ ಹಿರಿಯಣ್ಣನ ಇಹಲೋಕ ತ್ಯಜಿಸಿರುವುದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಿಬ್ಬಂದಿ ಹಾಗೂ ಪ್ರವಾಸಿಗರು ಕಂಬಿನಿ ಮಿಡಿದಿದ್ದಾರೆ.
ಭೋಗೇಶ್ವರ ಆನೆ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸಂತಾಪ ವ್ಯಕ್ತವಾಗಿ ಅಭಿಮಾನಿಗಳು ಮತ್ತು ಪ್ರಾಣಿಪ್ರಿಯರು ಕಂಬನಿ ಮಿಡಿದಿದ್ದಾರೆ.





