ಭಾರತದ ಗಡಿಯಲ್ಲಿ ನೆಲೆ ಭದ್ರಗೊಳಿಸುತ್ತಿರುವ ಚೀನಾ: ಅಮೆರಿಕ

Photo: PTI
ವಾಷಿಂಗ್ಟನ್, ಜೂ.12: ಭಾರತದ ಗಡಿಯುದ್ದಕ್ಕೂ ಚೀನಾವು ತನ್ನ ನೆಲೆಗಳನ್ನು ಗಟ್ಟಿಗೊಳಿಸುತ್ತಿದೆ. ಅಲ್ಲದೆ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಶನಿವಾರ ಹೇಳಿದ್ದಾರೆ.
ಚೀನಾವು ತನ್ನ ವಾಣಿಜ್ಯ ಮೀನುಗಾರಿಕೆ ಪ್ರಕ್ರಿಯೆಯನ್ನು ವಿಸ್ತರಿಸಿರುವುದು ಪೂರ್ವ ಚೀನಾ ಸಮುದ್ರ ವ್ಯಾಪ್ತಿಯ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಕಾನೂನುಬಾಹಿರ ಸಮುದ್ರ ಹಕ್ಕುಗಳನ್ನು ಮುನ್ನಡೆಸಲು ಮಾನವ ನಿರ್ಮಿತ ದ್ವೀಪಗಳಲ್ಲಿ ಹೊರಠಾಣೆಗಳನ್ನು ಬಳಸುತ್ತಿದೆ ಎಂದವರು ಹೇಳಿದ್ದಾರೆ.
ಇಂಡೊ-ಪೆಸಿಫಿಕ್ ದೇಶಗಳು ಕಡಲ ಸೇನಾಪಡೆಗಳಿಂದ ರಾಜಕೀಯ ಬೆದರಿಕೆ, ಆರ್ಥಿಕ ದಬ್ಬಾಳಿಕೆ ಅಥವಾ ಕಿರುಕುಳವನ್ನು ಎದುರಿಸಬಾರದು. ಇಂಡೊ-ಪೆಸಿಫಿಕ್ ವಲಯವು ಭಯ ಹುಟ್ಟಿಸುವ ಮತ್ತು ಬೆದರಿಸುವುದರಿಂದ ಮುಕ್ತವಾಗಿರಬೇಕು ಎಂಬುದು ಅಮೆರಿಕದ ಇಚ್ಛೆಯಾಗಿದೆ. ಭಾರತದ ಮಿಲಿಟರಿ ಸಾಮರ್ಥ್ಯ ಮತ್ತು ತಂತ್ರಜ್ಞಾನದ ಶಕ್ತಿಯ ಹೆಚ್ಚಳವು ಈ ವಲಯದಲ್ಲಿ ಸ್ಥಿರತೆ ಮೂಡಿಸುವುದಕ್ಕೆ ಪೂರಕವಾಗಲಿದೆ ಎಂದು ಆಸ್ಟಿನ್ ಹೇಳಿದ್ದಾರೆ. ಸಿಂಗಾಪುರದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟಂಟೆಜಿಕ್ ಸ್ಟಡೀಸ್ನ ಚಿಂತಕರು ಆಯೋಜಿಸಿದ್ದ ವಾರ್ಷಿಕ ಶಾಂಗ್ರಿಲಾ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾದ ರಕ್ಷಣಾ ಸಚಿವ ವೆಯ್ ಫೆಂಗ್, ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸದಂತೆ ಮತ್ತು ಅದರ ಹಿತಾಸಕ್ತಿಗೆ ಘಾಸಿ ತರದಂತೆ ಅಮೆರಿಕನ್ನು ಆಗ್ರಹಿಸಿದ್ದಾರೆ. 1949ರ ಅಂತರ್ಯುದ್ಧದ ಸಂದರ್ಭ ತೈವಾನ್ ಮತ್ತು ಚೀನಾ ಪ್ರತ್ಯೇಕಗೊಂಡಿದ್ದರೂ, ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ ಬಂಡುಗೋರ ಪ್ರಾಂತ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅದನ್ನು ಬಲಪ್ರಯೋಗಿಸಿಯಾದರೂ ಮೈನ್ಲ್ಯಾಂಡ್ ಚೀನಾದೊಂದಿಗೆ ವಿಲೀನ ಮಾಡಿಕೊಳ್ಳುವುದಾಗಿ ಹೇಳುತ್ತಿದೆ. ಅಮೆರಿಕ ತೈವಾನ್ಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದನ್ನು ಚೀನಾ ವಿರೋಧಿಸುತ್ತಿದೆ. ತೈವಾನ್ನ ಸ್ವಾತಂತ್ರ್ಯದ ಪಿತೂರಿಯನ್ನು ಹತ್ತಿಕ್ಕಲಾಗುವುದು ಮತ್ತು ಅದನ್ನು ಮೈನ್ಲ್ಯಾಂಡ್ ಜತೆ ವಿಲೀನ ಮಾಡಲು ದೃಢ ಸಂಕಲ್ಪ ಮಾಡಲಾಗಿದೆ ಎಂದು ಇತ್ತೀಚೆಗೆ ಲಾಯ್ಡ್ ಆಸ್ಟಿನ್ ಜತೆ ನಡೆಸಿದ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವೆಯ್ ಫೆಂಗ್ ಹೇಳಿದ್ದರು.
ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದ ಸಂಪೂರ್ಣ ಪ್ರದೇಶ ತನ್ನ ವ್ಯಾಪ್ತಿಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದೆ. ಆದರೆ ತೈವಾನ್, ಫಿಲಿಪ್ಪೀನ್ಸ್, ಬ್ರೂನೈ, ಮಲೇಶ್ಯಾ ಮತ್ತು ವಿಯೆಟ್ನಾಮ್ ದೇಶಗಳೂ ಈ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿರುವ ಚೀನಾ ಅಲ್ಲಿ ಸೇನಾನೆಲೆಗಳನ್ನು ಸ್ಥಾಪಿಸಿದೆ. ಪೂರ್ವ ಚೀನಾ ಸಮುದ್ರವ್ಯಾಪ್ತಿಯಲ್ಲಿ ಚೀನಾ-ಜಪಾನ್ ಮಧ್ಯೆ ವಿವಾದವಿದೆ.
2020ರ ಜೂನ್ನಲ್ಲಿ ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆದಂದಿನಿಂದ ಉಭಯ ದೇಶಗಳ ನಡುವಿನ ಗಡಿವಿವಾದ ಮುಂದುವರಿದಿದೆ.