ಸಾವಿರಾರು ಕುರಿಗಳ ಸಹಿತ ಮುಳುಗಿದ ಸುಡಾನ್ ಹಡಗು

ಖಾರ್ಟೌಮ್, ಜೂ.12: ಮಿತಿಮೀರಿ ಸಾವಿರಾರು ಕುರಿಗಳನ್ನು ಸಾಗಿಸುತ್ತಿದ್ದ ಹಡಗೊಂದು ಸುಡಾನ್‌ನ ಕೆಂಪು ಸಮುದ್ರದ ಸುವಾಕಿನ್ ಬಂದರಿನ ಬಳಿ ಸಮುದ್ರದಲ್ಲಿ ಮುಳುಗಿದ್ದು ಕುರಿಗಳು ನೀರು ಪಾಲಾಗಿವೆ. ಆದರೆ ಹಡಗಿನ ಸಿಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಡಾನ್‌ನಿಂದ ಸೌದಿ ಅರೆಬಿಯಾಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಮಿತಿಯನ್ನು ಮೀರಿ ಪ್ರಾಣಿಗಳನ್ನು ತುಂಬಿಸಿದ್ದರಿಂದ ಭಾರ ತಾಳಲಾರದೆ ಸಮುದ್ರದಲ್ಲಿ ಮುಳುಗಿದೆ ಎಂದು ಬಂದರು ಮಂಡಳಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
15,800 ಕುರಿಗಳನ್ನು ಸಾಗಿಸುತ್ತಿದ್ದ ಬದ್ರ್ 1 ಎಂಬ ಹಡಗು ರವಿವಾರ ಬೆಳಗ್ಗೆ ಸಮುದ್ರದಲ್ಲಿ ಮುಳುಗಿದೆ. ಈ ಹಡಗು 9000 ಕುರಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗಿನ ಸಿಬಂದಿಗಳನ್ನು ರಕ್ಷಿಸಲಾಗಿದೆ. ಮುಳುಗಿರುವ ಹಡಗು ಬಂದರಿನ ಕಾರ್ಯಾಚರಣೆಗೆ ತೊಡಕಾಗಲಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಜಾನುವಾರುಗಳು ಸತ್ತಿರುವುದರಿಂದ ಪರಿಸರ ಮಾಲಿನ್ಯದ ಅಪಾಯವೂ ಹೆಚ್ಚಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.







