ಉತ್ತರ ಪ್ರದೇಶ: ಫತೇಹಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ದನದ ಆರೈಕೆಗೆ ಏಳು ಪಶುವೈದ್ಯರ ತಂಡ!
ಸುದ್ದಿ ಅಲ್ಲಗಳೆದ ಅಧಿಕಾರಿ

ಸಾಂದರ್ಭಿಕ ಚಿತ್ರ
ಫತೇಹಪುರ್: ಉತ್ತರ ಪ್ರದೇಶದ ಫತೇಹಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪೂರ್ವ ದುಬೆ ಅವರ ಸಾಕು ದನದ ಆರೈಕೆಗಾಗಿ ಏಳು ಮಂದಿ ಪಶುವೈದ್ಯರ ತಂಡವನ್ನು ನಿಯೋಜಿಸಲಾಗಿರುವ ಕುರಿತಾದ ಆದೇಶದ ಪ್ರತಿಯೊಂದು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಆದರೆ ಈ ಕುರಿತು ಸ್ಪಷ್ಟೀಕರಣ ನೀಡಿರುವ ಅಪೂರ್ವ ದುಬೆ, ಇದು ತಮ್ಮ ವಿರುದ್ಧದ ಷಡ್ಯಂತ್ರ ಹಾಗೂ ತಾವು ಈ ಕುರಿತಂತೆ ಯಾವುದೇ ಆದೇಶ ನೀಡಿಲ್ಲ ಎಂದಿದ್ದಾರೆ.
ಈ ಆದೇಶವನ್ನು ಜೂನ್ 9 ರಂದು ನೀಡಲಾಗಿತ್ತು ಹಾಗೂ ಹಂಗಾಮಿ ಮುಖ್ಯ ಪಶುವೈದ್ಯಾಧಿಕಾರಿಗಳು ಅದನ್ನು ಮರುದಿನ ರದ್ದುಗೊಳಿಸಿದ್ದರು ಎನ್ನಲಾಗಿದೆ. ವಾರದ ಪ್ರತಿ ದಿನ ದನವನ್ನು ಆರೈಕೆ ಮಾಡಲು ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್, ಏಕಪಕ್ಷೀಯವಾಗಿ ಮುಖ್ಯ ಪಶುವೈದ್ಯಾಧಿಕಾರಿ ಇಂತಹ ಆದೇಶ ಹೊರಡಿಸಿದ್ದರು, ಮರುದಿನ ತಾವು ಹೇಳಿದ ನಂತರ ಆದೇಶ ವಾಪಸ್ ಪಡೆಯಲಾಗಿದೆ ಎಂದಿದ್ದಾರೆ.
ಪಶುವೈದ್ಯಕೀಯ ಅಧಿಕಾರಿಯೊಬ್ಬರು ಹಲವು ಎಚ್ಚರಿಕೆಗಳ ಹೊರತಾಗಿಯೂ ತಮ್ಮ ಕಾರ್ಯವೈಖರಿ ಸುಧಾರಿಸದೇ ಅವರ ವಿರುದ್ಧ ಹಿಂದೆ ದೂರು ನೀಡಿದ್ದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.





