"ಪ್ರಯಾಗರಾಜ್ ನಲ್ಲಿ ಮುಸ್ಲಿಮ್ ಕಾರ್ಯಕರ್ತನ ಮನೆಯನ್ನು ಧ್ವಂಸಗೊಳಿಸಿದ್ದು ಕಾನೂನುಬಾಹಿರ"
ಅಲಹಾಬಾದ್ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ

Photo: PTI
ಹೊಸದಿಲ್ಲಿ,ಜೂ.13: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಜಾವೇದ್ ಮುಹಮ್ಮದ್ ಅವರ ಮನೆಯನ್ನು ನೆಲಸಮಗೊಳಿಸಿರುವುದನ್ನು ಕಾನೂನುಬಾಹಿರ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಅವರು ಹೇಳಿದ್ದಾರೆ ಎಂದು The Indian Express ವರದಿ ಮಾಡಿದೆ.
ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿಯ ವಕ್ತಾರರಿಬ್ಬರ ನಿಂದನಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಪ್ರಯಾಗರಾಜ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಚು ಹೂಡಿದ್ದ ಆರೋಪದಲ್ಲಿ ಪೊಲೀಸರು ಜಾವೇದ್ ಅವರನ್ನು ಶನಿವಾರ ರಾತ್ರಿ ಬಂಧಿಸಿದ್ದು, ಮರುದಿನವೇ ಅಧಿಕಾರಿಗಳು ಅವರ ಮನೆಯನ್ನು ನೆಲಸಮಗೊಳಿಸಿದ್ದಾರೆ.
ಅಪರಾಧ ಪ್ರಕರಣಗಳಲ್ಲಿಯ ಯಾವುದೇ ಆರೋಪಿಯ ಮನೆಯನ್ನು ಧ್ವಂಸಗೊಳಿಸಲು ಭಾರತೀಯ ಕಾನೂನಿನಡಿ ನಿಬಂಧನೆಗಳು ಇಲ್ಲವಾದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇದು ಸಾಮಾನ್ಯವಾಗಿದೆ.
ಒಂದು ಕ್ಷಣದ ಮಟ್ಟಿಗೆ ಕಟ್ಟಡ ನಿರ್ಮಾಣ ಕಾನೂನುಬಾಹಿರ ಎಂದು ನೀವು ಭಾವಿಸಿದರೂ ನಿವಾಸಿಗಳು ಬಂಧನದಲ್ಲಿರುವಾಗ, ಅದೂ ರವಿವಾರ ಮನೆಯನ್ನು ನೆಲಸಮಗೊಳಿಸಲು ಅನುಮತಿಸಲಾಗುವುದಿಲ್ಲ. ಇಂದು ಕೋಟ್ಯಂತರ ಭಾರತೀಯರು ಅಕ್ರಮವಾಗಿ ನಿರ್ಮಿಸಲಾದ ಮನೆಗಳಲ್ಲಿ ವಾಸವಾಗಿದ್ದಾರೆ, ಅದು ಅವರಿಗೆ ಅನಿವಾರ್ಯವಾಗಿದೆ ಎಂದು The Indian Expressಗೆ ತಿಳಿಸಿದ ನ್ಯಾ.ಮಾಥುರ್, ಇದು ತಾಂತ್ರಿಕ ವಿಷಯವಲ್ಲ, ಕಾನೂನಿನ ಆಡಳಿತದ ಪ್ರಶ್ನೆಯಾಗಿದೆ ಎಂದರು.
2020, ಮಾರ್ಚ್ ನಲ್ಲಿ ನ್ಯಾ.ಮಾಥುರ್ ಅವರು 2019ರ ಡಿಸೆಂಬರ್ ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳ ಸಂದರ್ಭ ಹಿಂಸಾಚಾರ ಆರೋಪಿಗಳ ಕುರಿತು ಲಕ್ನೋದಲ್ಲಿ ಹೋರ್ಡಿಂಗ್ ಗಳನ್ನು ಹಾಕಿದ್ದ ಉ.ಪ್ರದೇಶ ಸರಕಾರದ ಕ್ರಮವನ್ನು ‘ಅತ್ಯಂತ ಅನ್ಯಾಯ’ ಎಂದು ಬಣ್ಣಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ಈ ಹೋರ್ಡಿಂಗ್ ಗಳು ಆರೋಪಿಗಳ ಚಿತ್ರಗಳು, ಹೆಸರುಗಳು ಮತ್ತು ವಿಳಾಸಗಳನ್ನು ಒಳಗೊಂಡಿದ್ದವು.
ಸರಕಾರದ ಕ್ರಮವು ಹೆಸರುಗಳು ಮತ್ತು ಚಿತ್ರಗಳನ್ನು ಪ್ರದರ್ಶಿಸಲಾದ ಜನರ ವೈಯಕ್ತಿಕ ಸ್ವಾತಂತ್ರದ ಸಂಪೂರ್ಣ ಅತಿಕ್ರಮಣವಾಗಿದೆ ಎಂದು ನ್ಯಾ.ಮಾಥುರ್ ಹೇಳಿದ್ದರು.
ರವಿವಾರ ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಬೆಳಿಗ್ಗೆ 11 ಗಂಟೆಯೊಳಗೆ ಮನೆಯನ್ನು ತೆರವುಗೊಳಿಸುವಂತೆ ಜಾವೇದ್ ರ ಕುಟುಂಬಕ್ಕೆ ಸೂಚಿಸಿತ್ತು. ಮೇ 24ರ ಮೊದಲು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ತಾನು ಮೇ 10ರಂದು ಜಾವೇದ್ ಗೆ ಶೋಕಾಸ್ ನೋಟಿಸ್ ನೀಡಿದ್ದೆ ಎಂದು ಅದು ಹೇಳಿಕೊಂಡಿತ್ತು.
ಆದರೆ,ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಬಗ್ಗೆ ತನ್ನ ಕುಟುಂಬಕ್ಕೆ ಯಾವುದೇ ನೋಟಿಸ್ ಅನ್ನು ಜಾರಿಗೊಳಿಸಿರಲಿಲ್ಲ ಎಂದು ಜಾವೇದ್ ರ ಕಿರಿಯ ಪುತ್ರಿ ಸುಮಯ್ಯ ಫಾತಿಮಾ ತಿಳಿಸಿದರು.
"ಶನಿವಾರ ರಾತ್ರಿ ನಮಗೆ ಮೊದಲ ನೋಟಿಸ್ ಸಿಕ್ಕಿತ್ತು. ಅದಕ್ಕೆ ಹಿಂದಿನ ಒಂದು ದಿನದವರೆಗೂ ಈ ಬಗ್ಗೆ ನಮ್ಮ ಬಳಿ ಯಾರೂ ಚಕಾರವನ್ನು ಎತ್ತಿರಲಿಲ್ಲ. ನಮ್ಮ ಮನೆಯು ಅಕ್ರಮ ನಿರ್ಮಾಣವಾಗಿದ್ದರೆ ಅವರೇಕೆ ಮೊದಲು ಬರಲಿಲ್ಲ ಮತ್ತು ನಮಗೆ ಮೊದಲೇ ನೋಟಿಸ್ ಗಳನ್ನೇಕೆ ನೀಡಿರಲಿಲ್ಲ? ಇದು ನಮ್ಮ ಪಾಲಿಗೆ ನಂಬಲೂ ಸಾಧ್ಯವಿಲ್ಲದಷ್ಟು ಕಠಿಣ ಸಮಯವಾಗಿದೆ" ಎಂದರು.
ತನನ್ನು ಮತ್ತು ತನ್ನ ತಾಯಿಯನ್ನೂ ಶನಿವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಮತ್ತು ಮರುದಿನ ಬೆಳಿಗ್ಗೆ ಬಿಡುಗಡೆಗೊಳಿಸಿದ್ದರು ಎಂದು ತಿಳಿಸಿದ ಫಾತಿಮಾ, ‘ಏನೋ ಒಂದು ವಿಷಯದ ಬಗ್ಗೆ ನಿಮ್ಮೊಂದಿಗೆ ಮಾತನಾಡುವುದಿದೆ ಮತ್ತು ನಂತರ ನೀವು ಮರಳಬಹುದು ಎಂದಷ್ಟೇ ಅವರು ನಮಗೆ ಹೇಳಿದ್ದರು. ನಾವು ಮನೆಯಲ್ಲಿ ಏನನ್ನು ಮಾತನಾಡುತ್ತೇವೆ ಮತ್ತು ಯಾವ ರೀತಿಯ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತೇವೆ ಎಂಬಂತಹ ವಿಲಕ್ಷಣ ಪ್ರಶ್ನೆಗಳನ್ನು ಅವರು ನಮಗೆ ಕೇಳಲಾರಂಭಿಸಿದ್ದರು. ನಮ್ಮ ಬಾಯಿಯಿಂದ ವಿವಾದಾತ್ಮಕವಾದ ಏನನ್ನಾದರೂ ಹೊರಡಿಸಲು ಅವರು ಪ್ರಯತ್ನಿಸಿದ್ದರು, ಆದರೆ ಅದು ಯಾವುದೂ ಸತ್ಯವಲ್ಲ. ನಾವು ಸತ್ಯವನ್ನು ಮಾತ್ರ ಹೇಳಿದ್ದೆವು’ ಎಂದರು.
ಮಹಿಳಾ ಪೊಲೀಸ್ ಅಧಿಕಾರಿಗಳು ತಮ್ಮಂದಿಗೆ ಮಾತನಾಡಲು ಪ್ರಯತ್ನಿಸಿದ್ದರು, ಆದರೆ ತನ್ನ ತಾಯಿಯನ್ನು ನಿಂದಿಸಿದ ಪುರುಷ ಅಧಿಕಾರಿಯೋರ್ವರು ಇವರಿಂದ ಸತ್ಯವನ್ನು ಹೊರಡಿಸಲು ಬಲ ಪ್ರಯೋಗ ಮಾಡಬೇಕು ಎಂದಿದ್ದರು ಎಂದು ಫಾತಿಮಾ ತಿಳಿಸಿದರು.
ಮನೆಯು ತನ್ನ ಕಕ್ಷಿದಾರರ ಪತ್ನಿಗೆ ಸೇರಿದ್ದಾಗಿದೆ ಎಂದು ಹೇಳಿದ ಜಾವೇದ್ ಪರ ವಕೀಲರು,ಆದರೆ ಆದೇಶದಲ್ಲಿ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ ಎಂದು ಹೇಳಿದರು.







