ಮಂಗಳೂರು : ತರಬೇತಿ ಪೂರ್ಣಗೊಳಿಸಿದ ಭಯೋತ್ಪಾದನಾ ನಿಗ್ರಹ ತಂಡ

ಮಂಗಳೂರು : ಮಂಗಳೂರು ನಗರ ಸೇರಿದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗಳಲ್ಲಿ ಆಂತರಿಕ ಭದ್ರತಾ ವಿಭಾಗದಡಿ (ಐಎಸ್‌ಡಿ) ನಗರ ಭಯೋತ್ಪಾದನಾ ನಿಗ್ರಹ ತಂಡ ರಚನೆಯ ನಿರ್ದೇಶನದಂತೆ ಮಂಗಳೂರಿನಲ್ಲೂ ತಂಡವೊಂದು ಸಿದ್ಧಗೊಂಡಿದೆ.
35 ಪೊಲೀಸ್ ಸಿಬ್ಬಂದಿಯನ್ನು ಹೊಂದಿದ ಮಂಗಳೂರಿನ ಭಯೋತ್ಪಾದನಾ ನಿಗ್ರಹ ತಂಡ ಈಗಾಗಲೇ ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಸಿಸಿಟಿ)ನಲ್ಲಿ ಎರಡು ತಿಂಗಳ ತರಬೇತಿ ಮುಗಿಸಿ ಮಂಗಳೂರಿಗೆ ಆಗಮಿಸಿದೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಕರ್ತವ್ಯದಲ್ಲಿ ಈ ತಂಡ ತೊಡಗಿಕೊಳ್ಳಲಿದೆ.
ನಗರದ ಪೊಲೀಸ್ ಕಮಿಷನರೇಟ್ ಕಚೇರಿ ಎದುರು ಆವರಣದಲ್ಲಿ ಇಂದು ತಂಡದ ಸಿಬ್ಬಂದಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಹಾಗೂ ತಂಡದ ಮುಖ್ಯಸ್ಥ ಸುಬ್ರಹ್ಮಣ್ಯ ಎಂ., ಇತರ ಹಿರಿಯ ಅಧಿಕಾರಿಗಳ ಎದುರು ಹಾಜರಾಗಿ ಗೌರವ ರಕ್ಷೆ ಸಲ್ಲಿಸಿದರು.
ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿ ಸುಸಜ್ಜಿತ ಆಯುಧಗಳ ಬಳಕೆ ಸೇರಿದಂತೆ ಸಮಗ್ರ ತರಬೇತಿಯನ್ನು ಈ ತಂಡದ ಸಿಬ್ಬಂದಿಗೆ ನೀಡಲಾಗಿದೆ. ಸಿಬ್ಬಂದಿ ಎರಡು ತಂಡವಾಗಿ (ತಂಡದಲ್ಲಿ 15 ಮಂದಿಯಂತೆ) ನಗರದಲ್ಲಿ ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಯಾರಾದರೂ ಸಿಬ್ಬಂದಿ ರಜೆಯಲ್ಲಿರುವಾಗ ಕರ್ತವ್ಯ ನಿರ್ವಹಣೆಗೆ ಅನುಗುಣವಾಗಿ ಐದು ಮಂದಿ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು 35 ಸಿಬ್ಬಂದಿಯ ತಂಡ ಎರಡು ತಿಂಗಳ ತರಬೇತಿ ಪೂರೈಸಿ ನಗರಕ್ಕೆ ಆಗಮಿಸಿದೆ. ಇವರಿಗೆ ಪ್ರತ್ಯೇಕ ಸಮವಸ್ತ್ರವೂ ಇರಲಿದೆ ಎಂದು ಮಂಗಳೂರು ನಗರ ಭಯೋತ್ಪಾದನಾ ನಿಗ್ರಹ ತಂಡದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಎಂ. ತಿಳಿಸಿದ್ದಾರೆ.
