ಸಿಇಟಿ ಪರೀಕ್ಷೆ ಮುಂದೂಡಲು ಎಐಡಿಎಸ್ಓ ಒತ್ತಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.13: ಬೋರ್ಡ್ ಪರೀಕ್ಷೆ ಹಾಗೂ ಸಿಇಟಿ ಪರೀಕ್ಷೆ ನಡುವೆ ಸಮಯಾವಕಾಶ ಸಿಗದಂತಹ ವೇಳಾಪಟ್ಟಿ ವಿದ್ಯಾರ್ಥಿಗಳಲ್ಲಿ ಅತೀವ ಆತಂಕ ಸೃಷ್ಟಿಸಿದೆ. ಹಾಗಾಗಿ ಸಿಇಟಿ ಪರೀಕ್ಷೆಯನ್ನು ಮುಂದೂಡುವಂತೆ ಎಂದು ಅಲ್ ಇಂಡಿಯಾ ಡೆಮಾಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗನೈಜೆಷನ್(ಎಐಡಿಎಸ್ಓ)ನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಜೂ.16, 17 ಮತ್ತು 18ರಂದು ಸಿಇಟಿ ಪರೀಕ್ಷೆಗಳು ನಿಗದಿಯಾಗಿದೆ. ಆದರೆ, ಜೂ.15ಕ್ಕೆ ಸಿಬಿಎಸ್ಇ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಗಳನ್ನು ಮುಗಿಸುತ್ತಿದ್ದಾರೆ. ಹಾಗಾಗಿ ಈ ವಿದ್ಯಾರ್ಥಿಗಳಿಗೆ ತಮ್ಮ ಬೋರ್ಡ್ ಪರೀಕ್ಷೆ ನಂತರ ಸಿಇಟಿ ಪರೀಕ್ಷೆಗೆ ಸಿದ್ಧರಾಗಲು ಮತ್ತು ಹಾಜರಾಗಲು ಯಾವುದೇ ಸಮಯಾವಕಾಶ ಇಲ್ಲ. ಶೈಕ್ಷಣಿಕ ಬಿಕ್ಕಟ್ಟುಗಳನ್ನು ಎದುರಿಸಿ ಈಗ ಪುನಃ ಶಿಕ್ಷಣಕ್ಕೆ ಮರಳಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವುದು ಸರಕಾರ ಮತ್ತು ಪರೀಕ್ಷಾ ಪ್ರಾಧಿಕಾರದ ಜವಾಬ್ದಾರಿ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗುವ ಗಣನೀಯ ಸಂಖ್ಯೆಯ ಸಿಬಿಎಸ್ಇ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು, ಪರೀಕ್ಷೆಗೆ ತಕ್ಕಮಟ್ಟಿಗೆ ತಯಾರಾಗಲು ಸಮಯಾವಕಾಶ ಕೊಡಬೇಕು ಅವರು ಒತ್ತಾಯಿಸಿದ್ದಾರೆ.





